ಜಂಜ್ ಗಿರ್: ಛತ್ತೀಸ್ ಗಢದ ಜಂಜ್ ಗಿರ್ ಚಾಪಾ ಜಿಲ್ಲೆಯಲ್ಲಿ ಬೋರ್ ವೆಲ್ ನಲ್ಲಿ ಸಿಲುಕಿರುವ 11 ವರ್ಷದ ಬಾಲಕನ ರಕ್ಷಣಾ ಕಾರ್ಯಾಚರಣೆ ಸತತ 16 ಗಂಟೆಗಳಿಂದ ನಡೆಯುತ್ತಿದೆ. ಮಲ್ಖರೋಡಾ ಬ್ಲಾಕ್ ನ ಪಿಹ್ರಿದ್ ಬೋರ್ ವೆಲ್ ನಲ್ಲಿ 80 ಅಡಿ ಆಳದಲ್ಲಿ ಸಿಲುಕಿರುವ ರಾಹುಲ್ ನನ್ನು ರಕ್ಷಿಸಲು ಎನ್ ಡಿಆರ್ ಎಫ್ ಹಾಗೂ ಎಸ್ ಡಿಆರ್ ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಜಿಲ್ಲಾಧಿಕಾರಿ ಜಿತೇಂದ್ರ ಶುಕ್ಲಾ, ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಅಗರ್ ವಾಲ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಆರು ಜೆಸಿಬಿಗಳ ಮೂಲಕ ಮಣ್ಣು ಅಗೆಯುವ ಕಾರ್ಯ ಮುಂದುವರೆದಿದೆ. ರಾತ್ರಿ ಸುಮಾರು 12 ಗಂಟೆಯವರೆಗೂ ತೆರೆದ ಕೊಳವೆ ಬಾವಿಯಲ್ಲಿ ಸಿಲುಕಿರುವ ರಾಹುಲ್ ಪ್ರತಿಕ್ರಿಯಿಸಿದ್ದಾನೆ. ಆ ಬಳಿಕ ಬೆಳಗ್ಗೆ ಕದಲಿರುವುದು ಗೊತ್ತಾಗಿದೆ. ವಿಶೇಷ ಕ್ಯಾಮರಾದಲ್ಲಿ ಆತನ ಚಲನ ವಲನ ಗೋಚರಿಸಿದೆ.
ಆಳದಲ್ಲಿರುವ ರಾಹುಲ್ ತಲುಪಲು ಇನ್ನೂ ಐದರಿಂದ ಆರು ಗಂಟೆ ಬೇಕಾಗಬಹುದು ಎಂದು ಜಿಲ್ಲಾಧಿಕಾರಿ ಜಿತೇಂದ್ರ ಕುಮಾರ್ ಶುಕ್ಲಾ ಹೇಳಿದ್ದಾರೆ. ರಾಹುಲ್ ಗೆ ಬಾಳೆಹಣ್ಣು ಮತ್ತು ಜ್ಯೂಸ್ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.ಅಲ್ಲದೇ ಕುಟುಂಬ ಸದಸ್ಯರೊಂದಿಗೆ ಧ್ವನಿಯ ಮೂಲಕ ಮಾತನಾಡುವ ಪ್ರಯತ್ನ ಮಾಡಲಾಗಿದೆ. ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯಲು ಸಮರೋಪಾದಿಯಲ್ಲಿ ಕಾರ್ಯಚರಣೆ ನಡೆದಿದೆ.
ಮಗ ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಘೇಲ್ ಅವರೇ ಅಲ್ಲಿಂದ ಪ್ರತಿ ಕ್ಷಣದ ಮಾಹಿತಿಯನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ತಿಳಿದುಬಂದಿದೆ.