ಚೆನ್ನೈ: ತಮಿಳುನಾಡಿನಲ್ಲಿ ಸಂಗ್ರಹಿಸಿದ ಕೋವಿಡ್ ಮಾದರಿಗಳಲ್ಲಿ 12 ಮಂದಿಗೆ ಒಮಿಕ್ರಾನ್ ಉಪತಳಿಯ ಹೊಸ ರೂಪಾಂತರಗಳಾದ ಬಿಎ4 ಮತ್ತು ಬಿಎ5 ಪತ್ತೆಯಾಗಿದ್ದು, ಹೈದರಾಬಾದ್‌ನ ಲ್ಯಾಬ್‌ನ ಅವರ ಫಲಿತಾಂಶ ಪಾಸಿಟಿವ್ ಬಂದಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ಭಾನುವಾರ ತಿಳಿಸಿದ್ದಾರೆ.
ಹೈದರಾಬಾದ್‌ನ ಲ್ಯಾಬ್‌ಗೆ ಕಳುಹಿಸಲಾಗಿದ 150 ಮಾದರಿಗಳ ಪೈಕಿ 12 ಮಾದರಿಗಳಲ್ಲಿ ಹೊಸ ಕೊರೋನಾವೈರಸ್ ರೂಪಾಂತರಿ ಉಪಸ್ಥಿತಿಯನ್ನು ದೃಢಪಡಿಸಿದೆ ಎಂದು ವೈದ್ಯಕೀಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹೇಳಿದ್ದಾರೆ.
"ನಾಲ್ವರಿಗೆ ಬಿಎ 4 ರೂಪಾಂತರಿ ಹಾಗೂ ಎಂಟು ಜನರಿಗೆ ಬಿಎ 5 ರೂಪಾಂತರ ದೃಢಪಟ್ಟಿದೆ. ಅವರೆಲ್ಲರನ್ನು ಪ್ರತ್ಯೇಕಿಸಲಾಗಿದೆ. ನಾವು ಈ 12 ಜನರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸದ್ಯ ಅವರೆಲ್ಲರೂ ಆರೋಗ್ಯವಾಗಿದ್ದಾರೆ" ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರ ಸಂಪರ್ಕಕ್ಕೆ ಬಂದ ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಆರೋಗ್ಯಾಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.