HEALTH TIPS

ಭಾರತೀಯರ 'ಜನಾಂಗೀಯ ಶುದ್ಧತೆ' ಅಧ್ಯಯನ ಯೋಜನೆಗೆ 122 ವಿಜ್ಞಾನಿಗಳು, ವಿದ್ವಾಂಸರ ಟೀಕೆ

ನವದೆಹಲಿ :ಭಾರತದಲ್ಲಿಯ ಜನಾಂಗಗಳ ಶುದ್ಧತೆಯನ್ನು ಪತ್ತೆ ಹಚ್ಚಲು ಯೋಜನೆಯೊಂದಕ್ಕೆ ಕೇಂದ್ರ ಸಂಸ್ಕೃತಿ ಸಚಿವಾಲಯವು ಹಣಕಾಸು ನೆರವು ಒದಗಿಸುತ್ತಿದೆ ಎಂಬ ವರದಿಯ ಕುರಿತು ಕಳವಳವನ್ನು ವ್ಯಕ್ತಪಡಿಸಿ ಹಲವಾರು ವಿಜ್ಞಾನಿಗಳು,ಇತಿಹಾಸಕಾರರು,ಲೇಖಕರು, ಮಾಜಿ ಅಧಿಕಾರಿಗಳು ಮತ್ತು ಇತರರು ಶುಕ್ರವಾರ ಸಚಿವಾಲಯಕ್ಕೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ ಎಂದು scroll.in ವರದಿ ಮಾಡಿದೆ.

ಭಾರತದಲ್ಲಿ ಅಥವಾ ಇತರ ಎಲ್ಲೇ ಆಗಿರಲಿ, ಜನಾಂಗಗಳ ಶುದ್ಧತೆಯನ್ನು ಪತ್ತೆ ಹಚ್ಚುವ ಕಲ್ಪನೆಯು ಅತ್ಯಂತ ಕಳವಳಕಾರಿಯಾಗಿದೆ ಎಂದು ಹೇಳಿರುವ 122 ಜನರ ಸಹಿಗಳನ್ನು ಹೊಂದಿರುವ ಪತ್ರವು, ಅಂತಹ ಯೋಜನೆಯು ಅಸಂಬದ್ಧ ಮತ್ತು ಅಪಾಯಕಾರಿಯಾಗಿದೆ, ಜೈವಿಕ ಜನಾಂಗಗಳ ಪರಿಕಲ್ಪನೆಯನ್ನು ಬಹಳ ಹಿಂದೆಯೇ ತಿರಸ್ಕರಿಸಲಾಗಿದೆ ಎಂದು ತಿಳಿಸಿದೆ.

ತಳಿಶಾಸ್ತ್ರಜ್ಞ ಹಾಗೂ ಸಂಖ್ಯಶಾಸ್ತ್ರಜ್ಞ ಪಾರ್ಥ ಪಿ.ಮಜುಮ್ದಾರ್, ಜೀವವಿಜ್ಞಾನಿಗಳಾದ ಅಮಿತಾಭ್ ಜೋಶಿ, ಎಲ್.ಎಸ್.ಶಶಿಧರ, ಸತ್ಯಜಿತ ಮೇಯರ್ ಮತ್ತು ರಾಘವೇಂದ್ರ ಗದಗಕರ, ಇತಿಹಾಸಕಾರರಾದ ರೊಮಿಲಾ ಥಾಪರ್ ಮತ್ತು ರಾಮಚಂದ್ರ ಗುಹಾ ಅವರು ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.

ಸಂಸ್ಕೃತಿ ಸಚಿವಾಲಯವು ಭಾರತದಲ್ಲಿಯ ಜನಾಂಗಗಳ ಆನುವಂಶಿಕ ಇತಿಹಾಸವನ್ನು ಪುಷ್ಟೀಕರಿಸಲು ಮತ್ತು ಶುದ್ಧತೆಯನ್ನು ಪತ್ತೆ ಹಚ್ಚಲು ಡಿಎನ್‌ಎ ಪ್ರೊಫೈಲಿಂಗ್ ಕಿಟ್ಗಳು ಮತ್ತು ಸಂಬಂಧಿತ ಯಂತ್ರಗಳ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ ಎಂದು ಎರಡು ವಾರಗಳ ಹಿಂದೆ ಮಾಧ್ಯಮ ವರದಿಯೊಂದು ತಿಳಿಸಿತ್ತು.

2019ರಲ್ಲಿ ಯೋಜನೆಯು ಆರಂಭಗೊಂಡಿದ್ದು, ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ,ಲಕ್ನೋದ ಬೀರಬಲ್ ಸಾಹನಿ ಇನ್ಸ್ಟಿಟ್ಯೂಟ್ ಆಫ್ ಪಾಲಿಯೊಸೈನ್ಸ್ಸ್ನ ಕೆಲವು ವಿಜ್ಞಾನಿಗಳು ಮತ್ತು ವಿದ್ವಾಂಸರು ಹಾಗೂ ಪುರಾತತ್ವ ಶಾಸ್ತ್ರಜ್ಞ ವಸಂತ ಶಿಂದೆ ಅವರು ಯೋಜನೆಯಲ್ಲಿ ಭಾಗಿಯಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು.

'ಕಳೆದ 10,000 ವರ್ಷಗಳಲ್ಲಿ ಭಾರತೀಯರ ವಂಶವಾಹಿಗಳ ರೂಪಾಂತರ ಮತ್ತು ಮಿಶ್ರಣ ಹೇಗೆ ಉಂಟಾಗಿವೆ ಎನ್ನುವುದನ್ನು ನೋಡಲು ನಾವು ಬಯಸಿದ್ದೇವೆ. ಇದು ಭಾರತದಲ್ಲಿ ಜನಾಂಗಗಳ ಶುದ್ಧತೆಯನ್ನು ಪತ್ತೆ ಹಚ್ಚುವ ಪ್ರಯತ್ನವಾಗಿದೆ ಎಂದೂ ನೀವು ಹೇಳಬಹುದು ' ಎಂದು ಶಿಂದೆಯವರನ್ನು ಉಲ್ಲೇಖಿಸಿ ವರದಿಯು ಹೇಳಿತ್ತು.

ಆದರೆ ವರದಿಯು ದಾರಿ ತಪ್ಪಿಸುವಂಥದ್ದಾಗಿದೆ ಎಂದು ಮೇ 31ರಂದು ಹೇಳಿದ್ದ ಸಂಸ್ಕೃತಿ ಸಚಿವಾಲಯವು, ವರದಿಯಲ್ಲಿ ಹೇಳಲಾಗಿರುವಂತೆ ಪ್ರಸ್ತಾವವು ಆನುವಂಶಿಕ ಇತಿಹಾಸವನ್ನು ಪುಷ್ಟೀಕರಿಸುವುದಕ್ಕೆ ಮತ್ತು ಭಾರತದಲ್ಲಿ ಜನಾಂಗಗಳ ಶುದ್ಧತೆಯನ್ನು ಪತ್ತೆ ಹಚ್ಚುವುದಕ್ಕೆ ಸಂಬಂಧಿಸಿಲ್ಲ ಎಂದು ಟ್ವೀಟಿಸಿತ್ತು.
ಜೂ.2ರಂದು ಶಿಂದೆ ಅವರೂ ವರದಿಯನ್ನು ತಿರಸ್ಕರಿಸಿ,ತನ್ನ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಹೇಳಿದ್ದರು. ವರದಿಯಲ್ಲಿ 'ಜನಾಂಗೀಯ ಶುದ್ಧತೆ' ಶಬ್ದದ ಬಳಕೆಯನ್ನು ಅವರು ಟೀಕಿಸಿದ್ದರು. ಜನರ ಚಲನವಲನಗಳು ಮತ್ತು ಬೆರೆಯುವಿಕೆಯಿಂದಾಗಿ ಭೂಮಿಯ ಮೇಲಿನ ಯಾವುದೇ ಜನಾಂಗವು ಶುದ್ಧವಲ್ಲ ಎನ್ನುವುದು ತಿಳಿದಿರುವ ಸಂಗತಿಯೇ ಆಗಿದೆ ಎಂದಿದ್ದರು.

ಮಾಧ್ಯಮ ವರದಿಗೆ ಸಂಬಂಧಿಸಿದಂತೆ ಸಂಸ್ಕೃತಿ ಸಚಿವಾಲಯ ಮತ್ತು ಶಿಂದೆಯವರ ಹೇಳಿಕೆಗಳನ್ನು ಸ್ವಾಗತಿಸಿರುವ ಪತ್ರಕ್ಕೆ ಸಹಿ ಹಾಕಿದವರು, ಜನಾಂಗಕ್ಕೆ, ವಿಶೇಷವಾಗಿ ಜನಾಂಗೀಯ ಶುದ್ಧತೆಯನ್ನು ಅಧ್ಯಯನ ಮಾಡಲು ಯಾವುದೇ ಹಾಲಿ ಅಥವಾ ಭವಿಷ್ಯದ ಯೋಜನೆಯನ್ನು ಸಂಬಂಧಿಸಿದವರು ಬಹಿರಂಗವಾಗಿ ನಿರಾಕರಿಸಬೇಕು ಎಂದು ನಾವು ಭಾವಿಸಿದ್ದೇವೆ. 'ಶುದ್ಧತೆ'ಯ ಪರಿಕಲ್ಪನೆಯು ಅರ್ಥಹೀನವಾಗಿರುವ ಜೊತೆಗೆ ಕೆಲವು ಗುಂಪುಗಳು ಇತರ ಗುಂಪುಗಳಿಗಿಂತ ಹೆಚ್ಚು ಅಥವಾ ಕಡಿಮೆ ಶುದ್ಧ ಎನ್ನುವುದನ್ನು ಸೂಚಿಸುತ್ತದೆ. ಮಾನವ ಇತಿಹಾಸವು 'ಹೆಚ್ಚು ಶುದ್ಧ' ಗುಂಪುಗಳಿಂದ 'ಕಡಿಮೆ ಶುದ್ಧ' ಗುಂಪುಗಳಿಗೆ ಆಗಿರುವ ಭೀಕರ ಅನ್ಯಾಯದ ನಿದರ್ಶನಗಳೊಂದಿಗೆ ತುಂಬಿದೆ. ಮಾನವರ ಜನಾಂಗೀಯ ಸ್ಟೀರಿಯೊಟೈಪಿಂಗ್ ಅನ್ನು ತಿರಸ್ಕರಿಸಲಾಗಿದೆ ಮತ್ತು ಭಾರತದಲ್ಲಿ ಈ ಪರಿಕಲ್ಪನೆಯನ್ನು ಪುನರುಜ್ಜೀವನಗೊಳಿಸುವ ಯಾವುದೇ ಪ್ರಯತ್ನ ನಡೆಯಬಾರದು ಎಂದು ಹೇಳಿದ್ದಾರೆ.

ಸಂಸ್ಕೃತಿ ಸಚಿವಾಲಯದ ಪರಿಗಣನೆಯಲ್ಲಿರುವ ಯೋಜನೆಯಿಂದ ಯಾವ ಫಲಿತಾಂಶವನ್ನು ನಿರೀಕ್ಷಿಸಲಾಗಿದೆ ಎನ್ನುವುದು ನಮಗೆ ಗೊತ್ತಿಲ್ಲ. ಅದು ಜನಾಂಗೀಯ ಶುದ್ಧತೆಗಳ ಪ್ರಶ್ನೆಗಳಿಗೆ ಕೈಹಚ್ಚಿದರೆ ಭಾರತೀಯರ ನಡುವೆ ಅಸಾಮರಸ್ಯವನ್ನು ಉಲ್ಬಣಗೊಳಿಸುತ್ತದೆ ಎನ್ನುವುದು ಖಚಿತ ಫಲಿತಾಂಶವಾಗಿರಲಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries