ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ತಗ್ಗುತ್ತಿದ್ದು, ಹೆಚ್ಚಿನ ನದಿಗಳ ನೀರಿನ ಮಟ್ಟವು ಕಡಿಮೆಯಾಗುತ್ತಿದೆ. ಆದರೆ, ಎರಡು ವಾರಗಳು ನಿರಂತರ ತೊಂದರೆ ಉಂಟುಮಾಡಿದ ಪ್ರವಾಹದಿಂದ ರಾಜ್ಯದಾದ್ಯಂತ 22 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಕ್ಯಾಚಾರ್ ಜಿಲ್ಲೆಯ ಪ್ರಮುಖ ಪಟ್ಟಣ ಸಿಲ್ಚಾರ್‌ನಲ್ಲಿ ಪರಿಸ್ಥಿತಿ ಭೀಕರವಾಗಿದೆ. ಕೊಪಿಲಿ, ಬರಾಕ್ ಮತ್ತು ಕುಶಿಯಾರಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವು ಪ್ರದೇಶಗಳು ಇನ್ನೂ ಜಲಾವೃತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಐದು ಮಂದಿ ಮೃತಪಟ್ಟಿದ್ದು, ಇಬ್ಬರು ಪ್ರವಾಹದಲ್ಲಿ ಕಣ್ಮರೆಯಾಗಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 126ಕ್ಕೆ ಏರಿದೆ.
ಪ್ರವಾಹದಿಂದ ರಾಜ್ಯದಾದ್ಯಂತ 2,542 ಗ್ರಾಮಗಳು ಹಾನಿಗೊಳಗಾಗಿವೆ. 2,17,413 ಜನರು 564 ಪರಿಹಾರ ನೆರವು ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಬೊಂಗೈಗಾಂವ್, ಚರೈಡಿಯೊ, ಚಿರಾಂಗ್, ಹೈಲಕಂಡಿ, ಮೋರಿಗಾಂವ್, ಸೋನಿತ್‌ಪುರ, ದಕ್ಷಿಣ ಸಲ್ಮಾರಾ ಮತ್ತು ಉದಲ್‌ಗುರಿಯಲ್ಲಿಯೂ ದೊಡ್ಡ ಪ್ರಮಾಣದಲ್ಲಿ ಭೂಸವಕಳಿ ಉಂಟಾಗಿದೆ.
ವಾರದಿಂದ ಜಲಾವೃತವಾಗಿರುವ ಸಿಲ್ಚಾರ್ ಪಟ್ಟಣದಲ್ಲಿ, ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಆಹಾರ, ಕುಡಿಯುವ ನೀರು ಮತ್ತು ಇತರ ಅಗತ್ಯ ವಸ್ತುಗಳ ಪ್ಯಾಕೆಟ್‌ಗಳನ್ನು ಸಂತ್ರಸ್ತರಿಗೆ ಒದಗಿಸುವ ಪರಿಹಾರ ಕಾರ್ಯಗಳನ್ನು ಸರ್ಕಾರ ನಡೆಸುತ್ತಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಪರಿಶೀಲಿಸಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, 'ಬೆಟ್ಕುಂಡಿಯಲ್ಲಿನ ಹಳ್ಳದ ದಂಡೆಯನ್ನು ಕಿಡಿಗೇಡಿಗಳು ಒಡೆದಿರುವುದರಿಂದ ನೀರು ಸಿಲ್ಚಾರ್ ಪಟ್ಟಣಕ್ಕೆ ನುಗ್ಗಿ, 'ಮಾನವ ನಿರ್ಮಿತ ಕೃತಕ ವಿಪತ್ತು' ಸೃಷ್ಟಿಯಾಗಿದೆ ಎಂದು ಆರೋಪಿಸಿದರು.