HEALTH TIPS

12 ಕ್ಯಾನ್ಸರ್‌ ರೋಗಿಗಳು ಸಂಪೂರ್ಣ ಗುಣ: ಹೊಸ ಔಷಧ ಪ್ರಯೋಗ ಯಶಸ್ವಿ

 ನವದೆಹಲಿ: ಕ್ಯಾನ್ಸರ್‌ ಮಾರಣಾಂತಿಕ ಕಾಯಿಲೆ ಎನಿಸಿದೆ. ಆದರೆ, ಇಂತಹ ಕ್ಯಾನ್ಸರ್‌ ಅನ್ನೂ ಸಂಪೂರ್ಣ ಗುಣಪಡಿಸಲು ಸಾಧ್ಯವೆಂದು ಅಮೆರಿಕದಲ್ಲಿ ನಡೆದ ಅಪರೂಪದ ವೈದ್ಯಕೀಯ ಪ್ರಯೋಗದಿಂದ ಸಾಬೀತಾಗಿದೆ. ಈ ಫಲಿತಾಂಶ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

ವಿಜ್ಞಾನಿಗಳು 'ಡೋಸ್ಟಾರ್ಲಿಮಾಬ್‌ನ (Dostarlimab) ಎಂಬ ಪ್ರತಿಕಾಯದ ಔಷಧಿ ಕಂಡುಹಿಡಿದಿದ್ದು, ಈ ಔಷಧಿಯ ವೈದ್ಯಕೀಯ ಪ್ರಯೋಗವನ್ನು ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನಲ್ಲಿ ನಡೆಸಲಾಗಿದೆ.

ಒಬ್ಬ ಭಾರತೀಯ ಸೇರಿ, ಗುದನಾಳ ಕ್ಯಾನ್ಸರ್‌ ಇದ್ದ 12 ರೋಗಿಗಳಿಗೆ ರೋಗವು ಎರಡು ಮತ್ತು ಮೂರನೇ ಹಂತದಲ್ಲಿದ್ದಾಗ ಡೋಸ್ಟಾರ್ಲಿಮಾಬ್‌ ಔಷಧವನ್ನು ಪ್ರತಿ ಮೂರು ವಾರಗಳಿಗೊಮ್ಮೆ ಆರು ತಿಂಗಳವರೆಗೆ ನೀಡಲಾಗಿದೆ. ಫಲಿತಾಂಶದಲ್ಲಿ ಎಲ್ಲ ಕ್ಯಾನ್ಸರ್‌ ಗೆಡ್ಡೆಗಳು ಸಂಪೂರ್ಣ ವಾಸಿಯಾಗಿದ್ದು, ಯಾವುದೇ ಅಡ್ಡಪರಿಣಾಮವಿಲ್ಲದೇ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು 'ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌' ಜರ್ನಲ್‌ನಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿ ಹೇಳಿದೆ.

ಚಿಕಿತ್ಸೆಯ ನಂತರ ಈ 12 ರೋಗಿಗಳನ್ನು ದೈಹಿಕ, ಎಂಡೋಸ್ಕೋಪಿ, ಬಯೋಸ್ಕೋಪಿ, ಪಿಇಟಿ ಸ್ಕ್ಯಾನ್‌ ಮತ್ತು ಎಂಆರ್‌ಐ ಸ್ಕ್ಯಾನ್‌ಗಳಂತಹ ಸರಣಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಸಿದಾಗ ಯಾವುದೇ ಗೆಡ್ಡೆಗಳು ಕಾಣಿಸಲಿಲ್ಲ. ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್‌ನಲ್ಲಿಯೂ ಗೆಡ್ಡೆಯ ಪುರಾವೆ ಇರಲಿಲ್ಲ ಎಂದು ಈ ಸಂಶೋಧನಾ ವರದಿಯ ಲೇಖಕರು ಹೇಳಿದ್ದಾರೆ.

'ಡೆಫಿಸಿಯೆಂಟ್‌ ಮಿಸ್‌ಮ್ಯಾಚ್ ರಿಪೇರಿ' (ಡಿಎಂಎಂಆರ್) ಗಟ್ಟಿ ಗೆಡ್ಡೆಗಳಿಗೆ ವಿಕಿರಣ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಕಿಮೋಥೆರಫಿಗೆ ಬದಲಿಯಾಗಿ ಡೋಸ್ಟಾರ್ಲಿಮಾಬ್‌ ಪ್ರತಿಕಾಯ ಔಷಧ ಪರಿಣಾಮಕಾರಿ ಚಿಕಿತ್ಸೆಯಾಗಿದೆಯೇ ಎಂದು ಕಂಡುಹಿಡಿಯಲು ಸಂಶೋಧಕರು ಮುಂದಾಗಿದ್ದಾರೆ.

ಮಿಸ್‌ಮ್ಯಾಚ್ ರಿಪೇರಿ (ಎಂಎಂಆರ್‌) ಕೊರತೆಯಿರುವ ಜೀವಕೋಶಗಳು ಸಾಮಾನ್ಯವಾಗಿ ಕ್ಯಾನ್ಸರ್‌ಗೆ ಕಾರಣವಾಗುವ ಅನೇಕ ಡಿಎನ್‌ಎ ರೂಪಾಂತರಗಳನ್ನು ಹೊಂದಿರುತ್ತವೆ. ಎಂಎಂಆರ್ ಕೊರತೆಯು ಗುದದ್ವಾರ ಕ್ಯಾನ್ಸರ್, ಜಠರಗರುಳಿನ ಕ್ಯಾನ್ಸರ್ ಮತ್ತು ಎಂಡೊಮೆಟ್ರಿಯಲ್ ಕ್ಯಾನ್ಸರ್‌ನಲ್ಲಿ ಸಾಮಾನ್ಯವಾಗಿದೆ ಎಂದು ಜರ್ನಲ್ ಹೇಳಿದೆ.

'ಈ ಚಿಕಿತ್ಸೆಯು ಖಂಡಿತವಾಗಿಯೂ ಕ್ರಾಂತಿಕಾರಿ ವಿಧಾನದ ಆರಂಭಿಕ ಹೆಜ್ಜೆ. ಅಪರೂಪದ ಪ್ರಯೋಗ ನಡೆಸಿರುವ ಸಂಶೋಧಕರು ಅಭಿನಂದನಾರ್ಹರು. ಪ್ರಯೋಗದ ಫಲಿತಾಂಶ ಹೊಸ ಆಶಾಕಿರಣ ಮೂಡಿಸಿದೆ. ಆದರೆ, ಇದು ಪ್ರಯೋಗದ ಆರಂಭಿಕ ಹಂತದಲ್ಲಿದೆ. ಇದರಿಂದ ಪ್ರಸ್ತುತ ಕ್ಯುರೇಟಿವ್ ಮಲ್ಟಿಮೋಡಲಿಟಿ ಚಿಕಿತ್ಸಾ ವಿಧಾನ ಬದಲಿಸಲು ಸಾಧ್ಯವಿಲ್ಲ' ಎಂದು ಹೈದರಾಬಾದ್‌ನ ಯಶೋದಾ ಆಸ್ಪತ್ರೆಗಳ ಹಿರಿಯ ಸಲಹೆಗಾರ, ವೈದ್ಯಕೀಯ ಆಂಕೊಲಾಜಿಸ್ಟ್ ಮತ್ತು ಹೆಮಟೋ ಆಂಕೊಲಾಜಿಸ್ಟ್ ಡಾ.ನಿಖಿಲ್ ಎಸ್. ಘದ್ಯಾಲ್‌ ಪಾಟೀಲ್ ಹೇಳಿದರು.

'ನಮ್ಮ ದೇಶದಲ್ಲಿ ಇದುವರೆಗೆ ಇಂತಹ ಯಾವುದೇ ರೀತಿಯ ಪ್ರಯೋಗಗಳು ನಡೆದಿಲ್ಲ. ಪೆಂಬ್ರೊಲಿಜುಮಾಬ್ ನಮ್ಮಲ್ಲಿ ಲಭ್ಯವಿದೆ. ಆದರೆ, ಡೋಸ್ಟಾರ್ಲಿಮಾಬ್ ಲಭ್ಯವಿಲ್ಲ, ಒಂದು ವೇಳೆ ಲಭಿಸಿದರೂ ಅದರ ಬೆಲೆ ಎಷ್ಟೆಂಬುದು ನಿಖರವಾಗಿ ತಿಳಿಯದು. ಆದರೆ, ಪ್ರತಿ ಡೋಸ್‌ಗೆ ಲಕ್ಷಾಂತರ ರೂಪಾಯಿಗಳ ಮೇಲಿರುವ ಅಂದಾಜಿದೆ' ಎಂದು ಅವರು ಪ್ರತಿಕ್ರಿಯಿಸಿದರು.

ಈ ಔಷಧದ ವೈದ್ಯಕೀಯ ಪ್ರಯೋಗವನ್ನು ಸೈಮನ್ ಮತ್ತು ಈವ್ ಕಾಲಿನ್ ಫೌಂಡೇಶನ್, ಗ್ಲಾಕ್ಸೊ ಸ್ಮಿತ್‌ಕ್ಲೈನ್, ಸ್ಟ್ಯಾಂಡ್ ಅಪ್ ಟು ಕ್ಯಾನ್ಸರ್, ಸ್ವಿಮ್ ಅಕ್ರಾಸ್ ಅಮೆರಿಕ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ಬೆಂಬಲಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries