ಚಿಲಿಯಲ್ಲಿ ಉದ್ಯೋಗಿಯೊಬ್ಬರ ಖಾತೆಗೆ 43 ಸಾವಿರ ರೂ. ಸಂಬಳ ಬದಲಿಗೆ ಬರೋಬ್ಬರಿ 1.42 ಕೋಟಿ ರೂಪಾಯಿ (286 ಪಟ್ಟು ಹೆಚ್ಚು) ಬಂದಿದ್ದು ಇದರಿಂದ ಖುಷಿಯಾದ ಆತ ಕಂಪನಿಗೆ ರಾಜಿನಾಮೆ ನೀಡಿ ನಾಪತ್ತೆಯಾಗಿದ್ದಾರೆ.
ಮೇ ತಿಂಗಳಲ್ಲಿ ಕಂಪನಿಯು ಆಕಸ್ಮಿಕವಾಗಿ ಉದ್ಯೋಗಿಗೆ ರೂ. 43,000 (500,000 ಪೆಸೊಗಳು) ಬದಲಿಗೆ ಸುಮಾರು 1.42 ಕೋಟಿ ರೂ. (165,398,851 ಚಿಲಿಯ ಪೆಸೊಗಳು) ಪಾವತಿಸಿತು. ನಂತರ, ಕಂಪನಿಯ ಆಡಳಿತವು ಅವರ ದಾಖಲೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ದೋಷ ಕಂಡುಬಂದಿತ್ತು.
ಇದು ತಿಳಿದ ಬಳಿಕ ಕಂಪನಿ ಉದ್ಯೋಗಿಯನ್ನು ಹಣ ಹಿಂತಿರುಗಿಸುವಂತೆ ಮನವಿ ಮಾಡಿದ್ದಾರೆ. ಆದರೆ ಹಣ ನೀಡುವುದಾಗಿ ಭರವಸೆ ನೀಡಿದ ಆತ ನಂತರ ಕೆಲಸಕ್ಕೆ ರಾಜಿನಾಮೆ ನೀಡಿ ಹಣದೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.
ಚಿಲಿಯ ಕೋಲ್ಡ್ ಕಟ್ ಗಳ ಅತಿದೊಡ್ಡ ಉತ್ಪಾದಕ ಸಂಸ್ಥೆ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್)ನಲ್ಲಿ ಆತ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಸಂಸ್ಥೆಯೂ ವ್ಯಕ್ತಿಗೆ ಆಕಸ್ಮಿಕವಾಗಿ ವರ್ಗಾವಣೆ ಮಾಡಿದ ಹಣವನ್ನು ಹಿಂಪಡೆಯಲು ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಂಡಿದೆ ಎಂದು ಹೇಳಿದೆ.