ಬದಿಯಡ್ಕ: ಭಾರೀ ಭರವಸೆಗಳೊಮದಿಗೆ ಆರಂಭಗೊಂಡಿದ್ದ ಕುಂಬಳೆ ಮುಳ್ಳೇರಿಯ ರಸ್ತೆಯ ಕಾಮಗಾರಿ ಇದೀಗ ಅನಿರೀಕ್ಷಿತ ರೀತಿಯಲ್ಲಿ ಕುಂಟುತ್ತಾ ಸಾಗಿದ್ದು, ಸಾರ್ವಜನಿಕರ ಆಕ್ರೋಶ, ವ್ಯಾಕುಲತೆಗೆ ಕಾರಣವಾಗಿದೆ.
ರೀಬಿಲ್ಡ್ ಕೇರಳ ಯೋಜನೆಯ ಭಾಗವಾಗಿ ಕುಂಬಳೆ-ಮುಳ್ಳೇರಿಯ 29 ಕಿಲೋಮೀಟರ್ ರಸ್ತೆ ಕಾಮಗಾರಿ ಕೆಎಸ್‍ಟಿಪಿ (ಕೇರಳ ಸ್ಟೇಟ್ ಟ್ರಾನ್ಸ್ ಪೋರ್ಟ್ ಪ್ರಾಜೆಕ್ಟ್)ಉಸ್ತುವಾರಿಯಲ್ಲಿ 158 ಕೋಟಿ.ರೂಗಳನ್ನು ವ್ಯಯಿಸಿ ಆರಂಭಿಸಲಾಗಿದೆ. ರಸ್ತೆಯ ಇಕ್ಕೆಲಗಳನ್ನು ಅಗಲಗೊಳಿಸುವ ಕಾರ್ಯ, ಮೋರಿ ಸಂಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಆದರೆ ಮೋರಿ ಸಂಕ ನಿರ್ಮಿಸುವಲ್ಲಿವರೆಗಿನ ವೇಗ ಅನಿರೀಕ್ಷಿತವಾಗಿ ನಿಂತುಹೋಗಿ ಆ ಬಳಿಕದ ಕಾಮಗಾರಿ ಸಂಪೂರ್ಣ ಕುಂಟುತ್ತಿದೆ. ಕುಂಬಳೆಯಿಂದ ಸೀತಾಂಗೋಳಿವರೆಗೆ ರಸ್ತೆಯ ಒಂದು ಬದಿಗೆ ಡಾಮರೀಕರಣ ಪೂರ್ಣಗೊಂಡಿದ್ದು, ಇನ್ನೊಂದು ಬದಿಯ ಕಾಮಗಾರಿಯ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಕೆಲವೆಡೆ 100-200 ಮೀಟರ್ ಗಳಷ್ಟು ಅಲ್ಲಲ್ಲಿ ಎರಡೂ ಬದಿಗಳಲ್ಲೂ ಡಾಮರೀಕರಣದ ಒಂದನೇ ಕೋಟಿಂಗ್ ನಡೆದಿದೆ.
ಸೀತಾಂಗೋಳಿ-ಬದಿಯಡ್ಕ ಸಂಚಾರ ದುಸ್ಥರ:
ಕಾಮಗಾರಿಯ ಭಾಗವಾಗಿ ಸೀತಾಂಗೋಳಿಯಿಂದ ಬದಿಯಡ್ಕ-ಮುಳ್ಳೇರಿಯದ ಕೆಲಸ ಕಾರ್ಯಗಳು ಇದೀಗ ಕಳೆದೊಂದು ತಿಂಗಳಿಂದ ನಿಂತೇ ಹೋಗಿದೆ. ಸೀತಾಂಗೋಳಿ, ಬೇಳ ಕಾನ್ವೆಂಟ್, ಕಟ್ಟತ್ತಂಗಡಿ, ಬೇಳ ಕುಮಾರಮಂಗಲ, ವಿಎಂ ನಗರ ನೀರ್ಚಾಲು, ಕನ್ನೆಪ್ಪಾಡಿ, ಕಾನತ್ತಿಲ ಗಳಲ್ಲಿ ರಸ್ತೆಯ ಒಂದು ಬದಿ ಅಲ್ಲಲ್ಲಿ ಡಾಮರೀಕರಣ ಮಾಡಲಾಗಿದೆ. ಮಿಕ್ಕೆಡೆಗಳಲ್ಲಿ ರಸ್ತೆ ಅಗರದುಹಾಕಲಾಗಿದ್ದು, ಇದೀಗ ಆಗಾಗ ಬೀಳುತ್ತಿರುವ ಮಳೆಯ ಕಾರಣ ಅಕ್ಷರಶಃ ಗದ್ದೆಯಂತೆ ಸಂಚಾರ ಭೀತಿಕರವಾಗಿದೆ. ನೀರ್ಚಾಲು ವಿಎಂ ನಗರದಲ್ಲಿ ವ್ಯಾಪಕ ಪ್ರಮಾಣದ ಕೆಸರುಗದ್ದೆ ನಿರ್ಮಾಣವಾಗಿದ್ದು, ಹಲವು ದ್ವಿಚಕ್ರ, ತ್ರಿಚಕ್ರ ವಾಹನಗಳು ಅಪಘಾತಕ್ಕೀಡಾಗಿ ವಾಹನ ಸವಾರರು ಆಸ್ಪತ್ರೆಗೆ ದಾಖಲಾದ ಘಟನೆಗಳೂ ನಡೆದಿದೆ.
ನೀರ್ಚಾಲು ಕೆಳಗಿನ ಪೇಟೆಯಲ್ಲಿ ಅವ್ಯವಸ್ಥಿತ ಕಾಮಗಾರಿಯ ಕಾರಣ ರಸ್ತೆ ಪಕ್ಕದಲ್ಲೇ ಇರುವ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಸ್ ತಂಗುದಾಣ(ಶೆಲ್ಟರ್) ಇಲ್ಲದಿರುವುದು ಮತ್ತು ಒಂದು ಬದಿಯ ರಸ್ತೆ ಅಗೆದು ಮಣ್ಣು ಹಾಕಿ ಅಗಲಗೊಳಿಸಿರುವುದರಿಂದ ಎರಡೂ ಬದಿಗಳಲ್ಲೂ ವಾಹನಗಳ ಅವ್ಯಾಹತ ಸಂಚಾರ ವಿದ್ಯಾರ್ಥಿಗಳ ಭಯಭೀತಿಯ ಸಂಚಾರಕ್ಕೆ ಕಾರಣವಾಗುತ್ತಿರುವುದು ಸ್ಥಳೀಯ ನಾಗರಿಕರ ಕಳವಳಕ್ಕೆ ಕಾರಣವಾಗಿದೆ.
ಚರಂಡಿಗಳಿಲ್ಲದೆ ಮುಳುಗಡೆ ಭೀತಿ:
ಮಹತ್ವದ ಅಂಶವೆಂದರೆ ಕುಂಬಳೆಯಿಂದ ಆರಂಭಿಸಿ ಮುಳ್ಳೇರಿಯದ ವರೆಗಿನ 29 ಕಿಲೋಮೀಟರ್ ಗಳಲ್ಲಿ ರಸ್ತೆಯ ಇಕ್ಕೆಲಗಳಲ್ಲಿದ್ದ ಚರಮಡಿಗಳನ್ನು ಸಂಪೂರ್ಣ ತೆಗೆಯಲಾಗಿದ್ದು, ಹೊಸ ಚರಂಡಿ ವ್ಯವಸ್ಥೆ ಇನ್ನೂ ಮಾಡದಿರುವುದರಿಂದ ಈ ಬಾರಿಯ ಮಳೆಗಾಲದಲ್ಲಿ ಹೆಚ್ಚಿನ ಪ್ರದೇಶಗಳೂ ಮುಳುಗಡೆಯ ಭೀತಿಯಲ್ಲಿದೆ. ಮಳೆ ನೀರು ಹೊರಹೋಗಲು ಎಲ್ಲಿಯೂ ವ್ಯವಸ್ಥೆಗಳಿಲ್ಲದಿರುವುದರಿಂದ ರಸ್ತೆಯಲ್ಲೇ ನೀರು ಕಟ್ಟಿನಿಂತು ಕೃತಕ ನೆರೆ, ಕೊಳಚೆ ನೀರು ಸೇರಿ ನೊಣ, ನುಸಿ ರೋಗಕಾರಕಗಳ ಸೃಷ್ಟಿ ಮತ್ತು ಕೆಸರುಮಯವಾದ ರಸ್ತೆಯಲ್ಲಿ ಬಂದು ಸೇರುವ ಮಣ್ಣಿನಿಂದ ಜಾರುವಿಕೆ ಉಂಟಾಗಿ ಅಪಘಾತಗಳು ನಿತ್ಯ ದೃಶ್ಯವಾಗಲಿದೆ ಎಂದೇ ಭಾವಿಸಲಾಗಿದೆ.
ಸೇತುವೆ ಸಂಶಯ:
ಇದೇ ವೇಳೆ ಪೆರಡಾಲ ಹೊಳೆಗೆ ಈ ರಸ್ತೆಯ ಮಡಿಪ್ಪು ಎಂಬಲ್ಲಿ ಸೇತುವೆಯಿದೆ. ನೂತನ ರಸ್ತೆ ನಿರ್ಮಾಣವಾಗುವ ಸಂದರ್ಭದಲ್ಲಿ ಪೆರಡಾಲ ಸೇತುವೇ ಏನಾಗಲಿದೆ ಎಂಬುದು ಹಲವರ ಕುತೂಹಲವಾಗಿದೆ. ಈಗಾಗಲೇ ಸೇತುವೆಯ ಅಡಿಭಾಗದಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಆದರೆ ಪ್ರಸ್ತುತ ಕಾಮಗಾರಿಯ ಸಂದರ್ಭದಲ್ಲಿ ಪೆರಡಾಲ ಸೇತುವೆಯ ದುರಸ್ಥಿ ಅಥವಾ ಹೊಸ ಸೇತುವೆ ನಿರ್ಮಾಣದ ಬಗ್ಗೆ ಯೋಜನೆಯಲ್ಲಿ ಅವಕಾಶವಿಲ್ಲ ಎಂದು ಅಧಿಕೃತರು ತಿಳಿಸಿದ್ದಾರೆ. ಚತುಷ್ಪಥ ರಸ್ತೆ ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ಸೇತುವೆಯನ್ನು ಈಗ ಇರುವ ರೀತಿಯಲ್ಲಿಯೇ ಮುಂದುವರಿಸಲಾಗುತ್ತಿದೆ ಎಂದು ಹೇಳಲಾಗಿದೆ. ಬದಿಯಡ್ಕದಿಂದ ಕನ್ನೆಪ್ಪಾಡಿಯ ವಿವಿಧೆಡೆಗಳಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ಗುಡ್ಡವು ಜರಿದು ಬಿದ್ದು ರಸ್ತೆ ಹಾಳಾಗದಂತೆ ಆಳೆತ್ತರದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಬದಿಯಡ್ಕ ಸಮೀಪ ಮಸೀದಿ ಬಳಿ ಬೃಹತ್ ಬಂಡೆಗಳಿಗೇ ತಡೆಗೋಡೆ ನಿರ್ಮಿಸಿರುವುದರ ಹಿಂದಿನ ಮಹತ್ವದ ಬಗ್ಗೆ ಯಾರಿಗೂ ಅರ್ಥವಾಗದೆ ವ್ಯರ್ಥ ಹಣ ಪೋಲುಮಾಡುವ ಕಾಮಗಾರಿಯೆಂಬ ಟೀಕೆಗೆ ಕಾರಣವಾಗಿದೆ. ಈ ಮಧ್ಯೆ ಅರ್ತಿಪಳ್ಳ, ನಾರಂಪಾಡಿ, ಮುಂದೆ ಮುಳ್ಳೇರಿಯದ ವರೆಗೂ ಅಲ್ಲಲ್ಲಿ ರಸ್ತೆ ಅಗೆಯಲಾಗಿದ್ದು, ಇತರ ಯಾವುದೇ ಕಾಮಗಾರಿ ನಡೆಯದಿರುವುದರಿಂದ ವಾಹÀನ ಸಂಚಾರ ದುಸ್ಥರವಾಗಿ ಪರಿಣಮಿಸಿದೆ.
ಅಭಿಮತ:
ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿದೆ. ಆದರೆ ಮಳೆಗಾಲ ಆಗಮಿಸಿರುವುದರಿಂದ ಇನ್ನು ಮಳೆ ಮುಗಿಯುವಲ್ಲಿ ವರೆಗೆ ಉದ್ದೇಶಿತ ವೇಗದಲ್ಲಿ ಕಾಮಗಾರಿ ನಡೆಸಲಾಗದು. ಡಾಮರೀಕರಣವೂ ಸಾಧ್ಯವಿಲ್ಲ. ಬೇಳ, ನೀರ್ಚಾಲು, ಕನ್ನೆಪ್ಪಾಡಿ ಮೊದಲಾದೆಡೆ ರಸ್ತೆಯ ಇಕ್ಕಟ್ಟುಗಳ ಕಾರಣ ಮತ್ತು ಕನ್ವರ್ಟ್ ಗಳಿರುವಲ್ಲಿ ಒಂದಷ್ಟು ನಿಧಾನಗತಿ ಆಗಿರುವುದು ನಿಜ. ಅದನ್ನು ಶೀಘ್ರ ಬಗೆಹರಿಸಲಾಗುವುದು. ಹೆಚ್ಚು ವಿದ್ಯಾರ್ಥಿಗಳು ಮತ್ತು ಜನನಿಬಿಡತೆಯ ನೀರ್ಚಾಲು ಕೆಳಗಿನ ಪೇಟೆಯಲ್ಲಿ ಡಾಮರೀಕರಣ ಆದಷ್ಟು ಬೇಗನೆ ಮುಗಿಸಲಾಗುವುದು. ವಿದ್ಯಾರ್ಥಿಗಳು, ಸಾರ್ವಜನಿಕರ ಅನುಕೂಲಕ್ಕೆ ವಿಶೇಷ ಬಸ್ ಬೇ ವ್ಯವಸ್ಥೆ ಬರಲಿದೆ. ಕಾರ್ಮಿಕರ ಕೊರತೆ ಇಲ್ಲ. ಮಳೆಗಾಲದ ಮೊದಲ ಹಮತ ಕೊನೆಗೊಳ್ಳುತ್ತಿರುವಂತೆ ಕಾಮಗಾರಿ ಮತ್ತಷ್ಟು ವೇಗಗೊಳ್ಳಲಿದೆ. ಸಾರ್ವಜನಿಕರು ಸಹಕರಿಸಬೇಕು.
-ರೋಬಿನ್ ಕೆ.
ಸಹಾಯಕ ಪ್ರಬಂಧಕ ಕೆ.ಎಸ್.ಟಿ.ಪಿ. ಕುಂಬಳೆ-ಮುಳ್ಳೇರಿಯ ರೋಡ್ ಪ್ರೊಜೆಕ್ಟ್