ಕೈಗಾರಿಕಾ ಉತ್ತೇಜನ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಇಲಾಖೆ ಮಂಗಳವಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಸಗಟು ಬೆಲೆ ಸೂಚ್ಯಂಕ ಆಧರಿತ ಹಣದುಬ್ಬರ ಮೇ ತಿಂಗಳಲ್ಲಿ ಶೇಕಡ 15.9ನ್ನು ತಲುಪಿದೆ. ಇದು ಏಪ್ರಿಲ್ ತಿಂಗಳಲ್ಲಿ ದಾಖಲಾದ ಶೇಕಡ 15.1ಕ್ಕಿಂತ ಅಧಿಕ.
2021ರ ಮೇ ತಿಂಗಳಲ್ಲಿ ಈ ಪ್ರಮಾಣ 13.1% ಆಗಿತ್ತು. ಇದು ಹೊಸ ಸರಣಿ (2011-12)ರ ಆರಂಭದ ಬಳಿಕ ದಾಖಲಾದ ಅತ್ಯಧಿಕ ಹಣದುಬ್ಬರವಾಗಿದೆ. 1999ರ ಸೆಪ್ಟೆಂಬರ್ ನಲ್ಲಿ ದಾಖಲಾದ ಶೇಕಡ 16ರ ಬಳಿಕ ಇದುವರೆಗಿನ ಗರಿಷ್ಠ ಹಣದುಬ್ಬರವಾಗಿದೆ. ಸತತ ಹದಿನಾಲ್ಕನೇ ತಿಂಗಳು ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಎರಡಂಕಿಯಲ್ಲಿ ಮುಂದುವರಿದಿದ್ದು, ಬೆಲೆ ಒತ್ತಡವನ್ನು ಇದು ಸೂಚಿಸುತ್ತದೆ.
ಖನಿಜ ತೈಲ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರ ಉತ್ಪನ್ನಗಳು, ಮೂಲ ಲೋಹಗಳು, ಆಹಾರೇತರ ಸರಕುಗಳು, ರಾಸಾಯನಿಕರಗಳು ಮತ್ತು ರಾಸಾಯನಿಕ ಉತ್ಪನ್ನಗಳು, ಆಹಾರೋತ್ಪನ್ನಗಳ ಬೆಲೆ ಹಿಂದಿನ ತಿಂಗಳಿಗಿಂತ ಅಧಿಕವಾಗಿರುವುದು 2022ರ ಮೇ ತಿಂಗಳಲ್ಲಿ ಹಣದುಬ್ಬರ ದಾಖಲೆ ಮಟ್ಟಕ್ಕೆ ಏರಲು ಪ್ರಮುಖ ಕಾರಣ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಆಹಾರ ಹಣದುಬ್ಬರ ಶೇಕಡ 10.9 ಆಗಿದ್ದು, ಇದು 2019ರ ಡಿಸೆಂಬರ್ ನಲ್ಲಿ ದಾಖಲಾದ 11.2%ವನ್ನು ಹೊರತುಪಡಿಸಿದರೆ ಅತ್ಯಧಿಕ. ತರಕಾರಿಯ ಹಣದುಬ್ಬರ ಅತ್ಯಧಿಕವಾಗಿದ್ದು, ಶೇಕಡ 56.4ರಷ್ಟು ಏರಿಕೆ ಕಂಡಿದೆ. ಆಲೂಗಡ್ಡೆ (24.8%), ಇಂಧನ ಮತ್ತು ವಿದ್ಯುತ್ (40.6%), ಉತ್ಪಾದಿತ ಸರಕುಗಳು (10.1%) ಏರಿಕೆ ಕಂಡಿವೆ. ಚಿಲ್ಲರೆ ಹಣದುಬ್ಬರ ಕೂಡಾ ಮೇ ತಿಂಗಳಲ್ಲಿ ದಾಖಲೆ 7.8%ಗೆ ಹೆಚ್ಚಿತ್ತು.