ತಿರುವನಂತಪುಂ: ಕೇರಳದ ಅಲಪ್ಪುಝದಲ್ಲಿನ ತನ್ನ ಮನೆಯಿಂದ 17 ವರ್ಷಗಳ ಹಿಂದೆ, ಮೇ 18, 2005ರಂದು ನಾಪತ್ತೆಯಾಗಿದ್ದ ಆಗ ಏಳು ವರ್ಷದ ಬಾಲಕನಾಗಿದ್ದ ರಾಹುಲ್ ಜೀವಂತವಾಗಿದ್ದಾನೆಂಬ ಆಶಾಭಾವನೆಯನ್ನು ಮೂಡಿಸುವ ಒಂದು ಪತ್ರ ಆತನ ತಾಯಿಗೆ ದೊರಕಿದೆ ಎಂದು thenewsminute.com ವರದಿ ಮಾಡಿದೆ.
ರಾಹುಲ್‍ಗಾಗಿ ವರ್ಷಗಟ್ಟಲೆ ಹುಡುಕಾಡಿ ಕೊನೆಗೆ ಮೇ 22, 2022ರಂದು ಆತನ ತಂದೆ ಎ ಆರ್ ರಾಜು ಆತ್ಮಹತ್ಯೆ ಮಾಡಿಕೊಂಡ ಕೆಲವೇ ದಿನಗಳಲ್ಲಿ ಆತನ ತಾಯಿ ಮಿನಿಗೆ ಒಂದು ಪತ್ರ ಬಂದಿದೆ.
ಪತ್ರ ಬರೆದಿರುವ ಮಹಿಳೆಯೊಬ್ಬರು ತಾವು ರಾಹುಲ್‍ನನ್ನೇ ಹೋಲುವ ಯುವಕನನ್ನು ನೋಡಿದ್ದಾಗಿ ಹಾಗೂ ಆತ ಪ್ರಸ್ತುತ ಎರ್ಣಾಕುಳಂ ಜಿಲ್ಲೆಯ ನೆಡುಂಬಸ್ಸೇರಿ ಎಂಬಲ್ಲಿ ವಾಸಿಸುತ್ತಿದ್ದಾನೆ ಎಂದು ಬರೆಯಲಾಗಿತ್ತು.
ಈ ವಿಷಯವನ್ನು ಮಿನಿ ಅಲಪ್ಪುಝ ಪೊಲೀಸರಿಗೆ ತಿಳಿಸಿ ಸೂಕ್ತ ತನಿಖೆಗೆ ಕೋರಿದ್ದರಲ್ಲದೆ ಫೋಟೋದಲ್ಲಿರುವ ಯುವಕ ನಾಪತ್ತೆಯಾಗಿರುವ ಪುತ್ರನನ್ನೇ ಹೋಲುತ್ತಾನೆ ಎಂದಿದ್ದಾರೆ.
ಆದರೆ ಈ ಯುವಕ ಈಗಾಗಲೇ ಹಲವು ಬಾರಿ ತನ್ನ ಹಿನ್ನೆಲೆಯ ಬಗ್ಗೆ ಮಾಧ್ಯಮದಲ್ಲಿ ಮಾತನಾಡಿದ್ದು ತನಗೆ ಹೆತ್ತವರ ಬಗ್ಗೆ ತಿಳಿದಿಲ್ಲ, ಚಿಕ್ಕಮ್ಮ ಬೆಳೆಸಿದ್ದರು, ಸುನಾಮಿ ವೇಳೆ ತಾನು 2004ರಲ್ಲಿ ಪತ್ತೆಯಾಗಿದ್ದಾಗಿಯೂ ಚಿಕ್ಕಮ್ಮ ಹೇಳಿದ್ದರೆಂದು ತಿಳಿಸಿದ್ದ. ಆತ ಮುಂದೆ ಒಂದು ವರ್ಷ ಮುಂಬೈಯಲ್ಲಿದ್ದು ನಂತರ ನೆಡುಂಬಸ್ಸೇರಿಗೆ ಮರಳಿ ಉದ್ಯೋಗದ ಜೊತೆಗೆ ಶಿಕ್ಷಣವನ್ನೂ ಮುಂದುವರಿಸಿದ್ದಾನೆ.
ಎರಡು ವರ್ಷಗಳ ಹಿಂದೆ ಪೊಲೀಸ್ ಸಿಬ್ಬಂದಿಯೊಬ್ಬರು ಆತನ ಫೋಟೋ ಪೋಸ್ಟ್ ಮಾಡಿ ನಾಪತ್ತೆಯಾದ ಬಾಲಕ ರಾಹುಲ್‍ನನ್ನು ಹೋಲುತ್ತಾನೆ ಎಂದ ನಂತರ ಆತ ಸುದ್ದಿಯಲ್ಲಿದ್ದ.
ಮಿನಿ ಅವರ ಪುತ್ರ ರಾಹುಲ್ ಅಲಪ್ಪುಝದ ಮನೆಯ ಸಮೀಪದ ಮೈದಾನದಲ್ಲಿ ಕ್ರಿಕೆಟ್ ಆಡಲು ಹೋದವನು ವಾಪಸಾಗಿರಲಿಲ್ಲ. ಆರಂಭದಲ್ಲಿ ಕ್ರೈಂ ಬ್ರ್ಯಾಂಚ್ ತನಿಖೆ ನಡೆಸಿದ್ದರೆ ನಂತರ ಸಿಬಿಐ ತನಿಖೆ ವಹಿಸಿಕೊಂಡಿತ್ತು. ಆದರೆ ಸಿಬಿಐ ಫೆಬ್ರವರಿ 2012ರಲ್ಲಿ ಪ್ರಕರಣದ ತನಿಖೆಯನ್ನು ಅಂತ್ಯಗೊಳಿಸಿತ್ತು.