ನೋಯ್ಡಾ: ಸಂಕಷ್ಟದಲ್ಲಿರುವವರಿಗೆ ನೆರವು ಒದಗಿಸುವ ಸಲುವಾಗಿ ತೆರೆಯಲಾಗಿರುವ ತುರ್ತು ಕರೆ ಸಂಖ್ಯೆ 112ಕ್ಕೆ, ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದಾದ್ಯಂತ ಮೇ ತಿಂಗಳಲ್ಲಿ ಬರೋಬ್ಬರಿ 18,393 ಕರೆಗಳು ಬಂದಿವೆ. ಗೌತಮ ಬುದ್ಧ ನಗರ ಪೊಲೀಸರು ಪ್ರತಿಗಂಟೆಗೆ ಸರಾಸರಿ 24 ಕರೆಗಳನ್ನು ಸ್ವೀಕರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತುರ್ತು ಕರೆಗಳಿಗೆ ಸ್ಪಂದಿಸುವ ವಿಚಾರದಲ್ಲಿ ಉತ್ತರ ಪ್ರದೇಶದ 75 ಜಿಲ್ಲೆಗಳ ಪೈಕಿ ಗೌತಮ ಬುದ್ಧ ನಗರ ಜಿಲ್ಲಾ ಪೊಲೀಸರು ಸತತ 11ನೇ ಬಾರಿಗೆ ಮೊದಲ ಸ್ಥಾನದಲ್ಲಿ ಉಳಿದುಕೊಂಡಿದ್ದಾರೆ. ತುರ್ತು ಕರೆಗಳಿಗೆ ಸ್ಪಂದಿಸುವ ಸರಾಸರಿ ಸಮಯವು ಆರು ನಿಮಿಷಗಳಿಗಿಂತಲೂ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.
'ಮೇ ತಿಂಗಳಲ್ಲಿ ಒಟ್ಟು 18,393 ತುರ್ತು ಕರೆಗಳನ್ನು ಗೌತಮ ಬುದ್ಧ ನಗರ ಪೊಲೀಸರು ಸ್ವೀಕರಿಸಿದ್ದಾರೆ. ಅದರಂತೆ, ಪೊಲೀಸ್ ಸ್ಪಂದನಾ ವಾಹನಗಳು (ಪಿಆರ್‌ವಿ) ತಕ್ಷಣವೇ ಸ್ಥಳಕ್ಕೆ ಧಾವಿಸಿ, ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಕರೆ ಮಾಡಿದ ಸಂತ್ರಸ್ತರಿಗೆ ನೆರವಾಗಿವೆ' ಎಂದು ಪೊಲೀಸ್ ಇಲಾಖೆ ವಕ್ತಾರರು ತಿಳಿಸಿದ್ದಾರೆ.
'ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮಹಿಳಾ ಸಿಬ್ಬಂದಿಯೇ ಇರುವ ಆರು ಪಿಆರ್‌ವಿಗಳು ಗೌತಮ ಬುದ್ಧ ನಗರದಲ್ಲಿ ಸಂಚರಿಸುತ್ತಿವೆ. ಸುರಕ್ಷತೆ ಮತ್ತು ಹೆದ್ದಾರಿಗಳಲ್ಲಿ ಕ್ಷಿಪ್ರ ಸ್ಪಂದನೆ ನೀಡುವ ಸಲುವಾಗಿ ಪೂರ್ವ ಹೊರವಲಯದ ಎಕ್ಸ್‌ಪ್ರೆಸ್‌ವೇನಲ್ಲಿ ನಾಲ್ಕು ಹಾಗೂ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಎರಡು ಪಿಆರ್‌ವಿಗಳು ಸಂಚರಿಸುತ್ತಿವೆ' ಎಂದು ಅವರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಜಿಲ್ಲೆಯಾದ್ಯಂತ ಕಳೆದ ಕೆಲವು ತಿಂಗಳುಗಳಿಂದ ಪ್ರತಿದಿನ ಸರಾಸರಿ 400-500 ತುರ್ತು ಕರೆಗಳನ್ನು ಪೊಲೀಸರು ಸ್ವೀಕರಿಸುತ್ತಿದ್ದಾರೆ. ಸುಮಾರು 65 ನಾಲ್ಕು ಚಕ್ರ ಪಿಆರ್‌ವಿಗಳು ಮತ್ತು 48 ದ್ವಿಚಕ್ರ ಪಿಆರ್‌ವಿಗಳು ಜಿಲ್ಲೆಯಾದ್ಯಂತ ಕಾರ್ಯಾಚರಿಸುತ್ತಿವೆ. ಮೇ ತಿಂಗಳಲ್ಲಿ ಜಿಲ್ಲಾ ಪೊಲೀಸರು ತುರ್ತು ಕರೆಗಳಿಗೆ ಚುರುಕಾಗಿ ಸ್ಪಂದಿಸಿದ್ದಾರೆ. ನಗರ ಪ್ರದೇಶದಲ್ಲಿ ಪ್ರತಿಕ್ರಿಯೆಯ ಅವಧಿಯು 4 ನಿಮಿಷ 39 ಸೆಕೆಂಡ್‌ಗಳಾಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 6 ನಿಮಿಷ 20 ಸೆಕೆಂಡ್‌ಗಳಷ್ಟಿದೆ. ಒಟ್ಟಾರೆ ಸರಾಸರಿ 5 ನಿಮಿಷ 42 ಸೆಕೆಂಡ್‌ಗಳಲ್ಲಿ ತುರ್ತು ಕರೆಗಳಿಗೆ ಸ್ಪಂದಿಸಲಾಗಿದೆ ಎಂದು ವಿವರಿಸಿದ್ದಾರೆ.