ನವದೆಹಲಿ: ಕೋರ್ಬೆವ್ಯಾಕ್ಸ್ ಕೋವಿಡ್-19 ಲಸಿಕೆಯನ್ನು ಡಿಸಿಜಿಐ ವೈವಿಧ್ಯಮಯ ಬೂಸ್ಟರ್ ಡೋಸ್ ನ್ನಾಗಿ ಬಳಕೆ ಮಾಡುವುದಕ್ಕೆ ಅನುಮೋದನೆ ನೀಡಿದೆ ಎಂದು ಬಯಾಲಾಜಿಕಲ್ ಇ ಲಿಮಿಟೆಡ್ ಹೇಳಿದೆ.
ಲಸಿಕೆ ತಯಾರಕ ಸಂಸ್ಥೆಯಿಂದ ಪತ್ರಿಕಾ ಪ್ರಕಟಣೆ ಬಿಡುಗಡೆಯಾಗಿದ್ದು, 18 ವರ್ಷದ ಮೇಲ್ಪಟ್ಟ ಮಂದಿಗೆ ಕೋರ್ಬೆವ್ಯಾಕ್ಸ್ ನ್ನು ಕೋವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ನ ಎರಡು ಡೋಸ್ ಲಸಿಕೆ ಪಡೆದು 6 ತಿಂಗಳು ಕಳೆದವರಿಗೆ ಬೂಸ್ಟರ್ ಡೋಸ್ ನ್ನಾಗಿ ನೀಡಬಹುದು ಎಂದು ಹೇಳಿದೆ. ಬೇರೆ ಲಸಿಕೆಗಳನ್ನು ಪಡೆದವರಿಗೂ ಕೋರ್ಬೆವ್ಯಾಕ್ಸ್ ನ್ನು ಬೂಸ್ಟರ್ ಡೋಸ್ ನ್ನಾಗಿ ನೀಡಬಹುದಾದ ಭಾರತದ ಮೊದಲ ಲಸಿಕೆಯಾಗಿದೆ.
ಬಯಾಲಾಜಿಕಲ್ ಇ ಲಿಮಿಟೆಡ್, ಇತ್ತೀಚೆಗಷ್ಟೇ ಕ್ಲಿನಿಕಲ್ ಟ್ರಯಲ್ಸ್ ನ ಡೇಟಾವನ್ನು ಡಿಸಿಜಿಐ ಜೊತೆ ಹಂಚಿಕೊಂಡಿತ್ತು. ಪರಿಣಾಮಕಾರಿಯಾದ ಬೂಸ್ಟರ್ ಡೋಸ್ ಗೆ ಅಗತ್ಯವಿರುವ ಸುರಕ್ಷತೆ ಪ್ರೊಫೈಲ್, ಪ್ರತಿರಕ್ಷಣಾ ಪ್ರತಿಕ್ರಿಯೆಯಲ್ಲಿನ ವರ್ಧನೆಯನ್ನು ಕೋರ್ಬೆವ್ಯಾಕ್ಸ್ ಕ್ಲಿನಿಕಲ್ ಟ್ರಯಲ್ ನಲ್ಲಿ ತೋರಿತ್ತು.
ಇದನ್ನೂ ಓದಿ:ಮಕ್ಕಳಿಗೆ ಲಸಿಕೆ, ಬೂಸ್ಟರ್ ಡೋಸ್ ನಿಂದ ಲಾಕ್ ಡೌನ್ ತಪ್ಪಿಸಲು ನೆರವು- ಡಾ. ಕೆ. ಸುಧಾಕರ್
ಕೇಂದ್ರದ ಅನುಮೋದನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಯಾಲಾಜಿಕಲ್ ಇ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾದ ಮಹಿಮಾ ಡಾಟ್ಲಾ, "ಕೋರ್ಬೆವ್ಯಾಕ್ಸ್ ಲಸಿಕೆಯನ್ನು ಬೂಸ್ಟರ್ ಡೊಸ್ ನ್ನಾಗಿ ಬಳಕೆ ಮಾಡಲು ಅನುಮೋದನೆ ಸಿಕ್ಕಿರುವುದು ಭಾರತದ ಮತ್ತೊಂದು ಮೈಲಿಗಲ್ಲು" ಎಂದು ಬಣ್ಣಿಸಿದ್ದಾರೆ.