ನವದೆಹಲಿ: ವಿವಿಧ ರಾಜ್ಯಗಳಲ್ಲಿ ಹಲವು ಕಾರಣಗಳಿಗೆ ತೆರವಾಗಿರುವ ಎರಡು ಲೋಕಸಭಾ ಕ್ಷೇತ್ರ ಮತ್ತು ಏಳು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಶನಿವಾರ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಹೊಸದಾಗಿ ನೇಮಕಗೊಂಡ ತ್ರಿಪುರ ಮುಖ್ಯಮಂತ್ರಿ ಡಾ ಮಾಣಿಕ್ ಸಹಾ ಅವರು ಟೌನ್ ಬೋರ್ಡೋವಾಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಗಿಳಿಯಲಿದ್ದಾರೆ.
ರಾಜ್ಯಸಭೆಗೆ ಮರುನಾಮನಿರ್ದೇಶಗೊಳ್ಳುವಲ್ಲಿ ವಿಫಲರಾಗಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಉತ್ತರ ಪ್ರದೇಶದ ರಾಂಪುರ ಲೋಕಸಭೆಯಿಂದ ಟಿಕೆಟ್ ಪಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಘನಶ್ಯಾಮ್ ಲೋಧಿ ಎಂಬುವವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಗಳಿಗೆ ಕೇಂದ್ರ ಚುನಾವಣಾ ಸಮಿತಿಯು ಹೆಸರುಗಳನ್ನು ಅಂತಿಮಗೊಳಿಸಿರುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತ್ರಿಪುರದ ಅಗರ್ತಲಾ ವಿಧಾನಸಭಾ ಕ್ಷೇತ್ರದಿಂದ ಡಾ ಅಶೋಕ್ ಸಿನ್ಹಾ ದಿಂದ, ಸ್ವಪ್ನಾ ದಾಸ್ ಪಾಲ್ ಅವರು ಸುರ್ಮಾ ಕ್ಷೇತ್ರದಿಂದ ಮತ್ತು ಮಲಿನಾ ದೇಬನಾಥ್ ಅವರು ಜುಬರಾಜನಗರ ನಿಂದ ಸ್ಫರ್ಧಿಸಲಿದ್ದಾರೆ.
ದೆಹಲಿಯ ರಾಜಿಂದರ್ ನಗರ ವಿಧಾನಸಭಾ ಕ್ಷೇತ್ರದಿಂದ ರಾಜೇಶ್ ಭಾಟಿಯಾ ಅವರನ್ನು ಕಣಕ್ಕಿಳಿಸಲಾಗಿದೆ.
ಜಾರ್ಖಂಡ್‌ನ ಮಂದರ್ ವಿಧಾನಸಭಾ ಕ್ಷೇತ್ರದಿಂದ ಗಂಗೋತ್ರಿ ಕುಜೂರ್ ಮತ್ತು ಆಂಧ್ರಪ್ರದೇಶದ ಆತ್ಮಕೂರ್ ವಿಧಾನಸಭಾ ಕ್ಷೇತ್ರದಿಂದ ಗುಂಡ್ಲಪಲ್ಲಿ ಭರತ್ ಕುಮಾರ್ ಯಾದವ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಲೋಕಸಭೆ ಮತ್ತು ವಿಧಾನಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 6 ಕೊನೆಯ ದಿನವಾಗಿದೆ. ಜೂನ್ 23 ರಂದು ಮತದಾನ ನಡೆಯಲಿದ್ದು, ಜೂನ್ 26 ರಂದು ಮತ ಎಣಿಕೆ ನಡೆಯಲಿದೆ.