ನವದೆಹಲಿ: ಹೂಡಿಕೆದಾರರಿಗೆ ವಂಚಿಸಿದ ಮತ್ತು ಹಣ ಅಕ್ರಮ ವರ್ಗಾವಣೆಯ ಪ್ರಕರಣದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಸೇರಿದ ₹110 ಕೋಟಿ ಮೌಲ್ಯದ 200ಕ್ಕೂ ಹೆಚ್ಚು ಆಸ್ತಿಗಳು ಮತ್ತು ಕೋಟ್ಯಂತರ ಬೆಲೆಯ ಫ್ಲ್ಯಾಟ್‌ಗಳನ್ನು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ತಿಳಿಸಿದೆ.
210 ಆಸ್ತಿಗಳ ಪೈಕಿ 196 ಆಸ್ತಿಗಳು ಆಂಧ್ರಪ್ರದೇಶದಲ್ಲಿ, 13 ತೆಲಂಗಾಣದಲ್ಲಿ ಮತ್ತು ಒಂದು ಆಸ್ತಿ ಕರ್ನಾಟಕದಲ್ಲಿವೆ. ಈ ಆಸ್ತಿಗಳಲ್ಲಿ ಜಮೀನುಗಳು, ಫ್ಲ್ಯಾಟ್‌ಗಳು ಸೇರಿವೆ. ಇವು, ಮೈತ್ರಿ ಪ್ಲಾಂಟೇಶನ್ ಮತ್ತು ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್, ಇದರ ಸಹೋದರ ಸಂಸ್ಥೆಗಳಾದ ಶ್ರೀ ನಕ್ಷತ್ರ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಮೈತ್ರಿ ರಿಯಲ್ಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರಾದ ಲಕ್ಕು ಕೊಂಡ ರೆಡ್ಡಿ, ಲಕ್ಕು ಮಲ್ಯಾದ್ರಿ ರೆಡ್ಡಿ, ಲಕ್ಕು ಮಾಧವ ರೆಡ್ಡಿ ಮತ್ತು ಕೋಳಿಕಲಪುಡಿ ಬ್ರಹ್ಮಾ ರೆಡ್ಡಿ ಅವರ ಹೆಸರಿನಲ್ಲಿದ್ದವು.
ಮೈತ್ರಿ ಮತ್ತು ಶ್ರೀ ನಕ್ಷತ್ರ ಸಮೂಹದ ಈ ಸಂಸ್ಥೆಗಳು ಪರವಾನಗಿ ಇಲ್ಲದೇ, ಹೂಡಿಕೆದಾರರಿಗೆ ಹೆಚ್ಚಿನ ಕಮಿಷನ್ ಆಸೆ ತೋರಿಸಿ, ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದವು. ಈ ಹಣವನ್ನು ತಮ್ಮ ಸಮೂಹದ ಸಂಸ್ಥೆಗಳಿಗೆ ಅಕ್ರಮವಾಗಿ ವರ್ಗಾಯಿಸಿ,ಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದವು ಎಂದು ಇ.ಡಿ ಆರೋಪಿಸಿದೆ.
ಈ ಸಂಸ್ಥೆಗಳ ನಿರ್ದೇಶಕರು ಹೂಡಿಕೆದಾರರಿಗೆ ಸುಮಾರು ₹158.14 ಕೋಟಿ ಮರುಪಾವತಿಸಲು ವಿಫಲವಾಗಿದ್ದು, 2013ರ ಮಾರ್ಚ್‌ನಲ್ಲಿ ಆರೋಪಿಗಳ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಹತ್ತಾರು ಎಫ್‌ಐಆರ್‌ಗಳನ್ನು ದಾಖಲಿಸಿದ್ದರು. ಇದನ್ನು ಆಧರಿಸಿ, ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಇ.ಡಿ ಹೇಳಿದೆ.