ನವದೆಹಲಿ: ಉದಯ್ ಪುರ ಟೈಲರ್ ಹತ್ಯೆ ಪ್ರಕರಣದ ಹಂತಕರಿಗೆ ಪಾಕಿಸ್ತಾನದ ಸಂಘಟನೆಯೊಂದರ ನಂಟು ಇತ್ತು ಎಂದು ರಾಜಸ್ಥಾನದ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಕನ್ಹಯ್ಯ ಲಾಲ್ ಹಂತಕರು 2014 ರಲ್ಲಿ ಪಾಕಿಸ್ತಾನದ ಕರಾಚಿಗೆ ಹೋಗಿಬಂದಿದ್ದರು. ಈ ಹಂತಕರಿಗೆ ಪಾಕಿಸ್ತಾನ ಮೂಲದ ದವಾತ್-ಎ-ಇಸ್ಲಾಮಿ ಸಂಘಟನೆಯ ನಂಟಿತ್ತು ಎಂಬುದು ಪೊಲೀಸ್ ಮುಖ್ಯಸ್ಥರ ಹೇಳಿಕೆಯಿಂದ ಬಹಿರಂಗಗೊಂಡಿದೆ.
ಹತ್ಯೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಇನ್ನೂ ಮೂವರನ್ನು ಈ ವರೆಗೆ ಬಂಧಿಸಿದ್ದಾರೆ ಎಂದು ಡಿಜಿಪಿ ಎಂಎಲ್ ಲಾಥರ್ ಜೈಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರವಾದಿ ಮೊಹಮ್ಮದ್ ಬಗ್ಗೆ ಟಿವಿ ಚರ್ಚೆಯೊಂದರಲ್ಲಿ ಮಾತನಾಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ್ದ ರಾಜಸ್ಥಾನದ ಟೈಲರ್ ಕನ್ಹಯ್ಯ ಲಾಲ್ (45) ಎಂಬುವವರನ್ನು ರಿಯಾಜ್ ಅಖ್ತಾರಿ ಹಾಗೂ ಗೌಸ್ ಮೊಹಮ್ಮದ್ ಎಂಬ ಇಬ್ಬರು ಟೈಲರ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದರು. ಹತ್ಯೆಯ ವಿಡಿಯೋವನ್ನೂ ಹಂಚಿಕೊಂಡಿದ್ದ ಹಂತಕರು ಇಸ್ಲಾಮ್ ಗೆ ಅವಮಾನ ಮಾಡಿದ್ದಕ್ಕಾಗಿ ಈ ರೀತಿ ಸೇಡು ತೀರಿಸಿಕೊಂಡಿದ್ದೇವೆ ಎಂದು ವಿಡಿಯೋ ಮೂಲಕ ತಿಳಿಸಿದ್ದರು.
ಇಬ್ಬರೂ ಹಂತಕರ ವಿರುದ್ಧ ಯುಎಪಿಎ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪೈಕಿ ಓರ್ವ ಆರೋಪಿ ಗೌಸ್ ಎಂಬಾತನಿಗೆ ಕರಾಚಿ ಮೂಲದ ಇಸ್ಲಾಮಿಕ್ ಸಂಘಟನೆ ದವಾತ್-ಎ- ಇಸ್ಲಾಮಿ ಜೊತೆ ನಂಟಿದೆ. ಪ್ರಕರಣದಲ್ಲಿ ಈ ವರೆಗೂ ಒಟ್ಟು 5 ಮಂದಿಯ ಬಂಧನವಾಗಿದೆ.