ನವದೆಹಲಿ: ಕೇಂದ್ರ ಸರ್ಕಾರ 2021-22ನೇ ಸಾಲಿನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಬಡ್ಡಿದರವನ್ನು ಶೇಕಡ 8.1 ನಿಗದಿಪಡಿಸಿ ಅನುಮೋದನೆ ನೀಡಿದ್ದು, ಇದು ಕಳೆದ ನಾಲ್ಕು ದಶಕಗಳಲ್ಲೇ ಅತ್ಯಂತ ಕಡಿಮೆ ಬಡ್ಡಿದರವಾಗಿದೆ.
ಈ ಬಡ್ಡಿದರ ಐದು ಕೋಟಿಗೂ ಹೆಚ್ಚು ಇಪಿಎಫ್‌ಒ ಚಂದಾದಾರರ ಮೇಲೆ ನೇರ ಪ್ರಭಾವ ಬೀರಲಿದೆ. ಮಾರ್ಚ್‌ನಲ್ಲಿ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) 2021-22ರ ಹಣಕಾಸು ವರ್ಷಕ್ಕೆ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇಕಡಾ 8.5 ರಿಂದ 8.1 ಕ್ಕೆ ಇಳಿಸಲು ನಿರ್ಧರಿಸಿತ್ತು.
ಈ ಸಂಬಂಧ ಶುಕ್ರವಾರ ಇಪಿಎಫ್‌ಒ ಕಚೇರಿ ಹೊರಡಿಸಿದ ಆದೇಶದ ಪ್ರಕಾರ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇಪಿಎಫ್ ಯೋಜನೆಯ ಪ್ರತಿಯೊಬ್ಬ ಸದಸ್ಯರಿಗೆ 2021-22ಕ್ಕೆ ಶೇ.8.1 ಪ್ರತಿಶತ ಬಡ್ಡಿದರವನ್ನು ಪಾವತಿಸಲು ಕೇಂದ್ರ ಸರ್ಕಾರದ ಅನುಮೋದನೆ ನೀಡಿದೆ.
ಇದಕ್ಕೂ ಮುನ್ನ ಕಾರ್ಮಿಕ ಸಚಿವಾಲಯ ಇದರ ಒಪ್ಪಿಗೆಗಾಗಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಿತ್ತು. ಸರ್ಕಾರದ ಅನುಮೋದನೆಯ ನಂತರ, ಇಪಿಎಫ್‌ಒ ಆರ್ಥಿಕ ವರ್ಷಕ್ಕೆ ನಿಗದಿತ ಬಡ್ಡಿ ದರವನ್ನು ಉದ್ಯೋಗಿಗಳ ಖಾತೆಗಳಲ್ಲಿ ಠೇವಣಿ ಮಾಡಲು ಪ್ರಾರಂಭಿಸಲಿದೆ.