ನವದೆಹಲಿ: ಈ ವರ್ಷ ರೈಲ್ವೆ ಇಲಾಖೆ ಬರೊಬ್ಬರಿ 9,000 ರೈಲುಗಳ ಸೇವೆಯನ್ನು ರದ್ದುಗೊಳಿಸಿದ್ದು ಈ ಪೈಕಿ 1,900 ರೈಲುಗಳನ್ನು ಕಳೆದ 3 ತಿಂಗಳಿನಿಂದ ಕಲ್ಲಿದ್ದಲು ಸಾಗಣೆಗಾಗಿ ಸ್ಥಗಿತಗೊಳಿಸಲಾಗಿದೆ.
ಚಂದ್ರಶೇಖರ್ ಗೌರ್ ಎಂಬುವವರು ಸಲ್ಲಿಸಿದ ಆರ್ ಟಿಐ ಅರ್ಜಿಯೊಂದಕ್ಕೆ ಬಂದಿರುವ ಮಾಹಿತಿಯ ಪ್ರಕಾರ ದುರಸ್ತಿ ಹಿನ್ನೆಲೆ ಅಥವಾ ನಿರ್ಮಾಣ ಉದ್ದೇಶಗಳಿಗಾಗಿ 6,995 ರೈಲುಗಳನ್ನು, 1,934 ರೈಲು ಸೇವೆಗಳನ್ನು ಮಾರ್ಚ್ ನಿಂದ ಮೇ ವರೆಗೆ ಕಲ್ಲಿದ್ದಲು ಸಾಗಣೆಗಾಗಿ ರದ್ದುಗೊಳಿಸಲಾಗಿತ್ತು.
ವಿದ್ಯುತ್ ಅಭಾವ ಎದುರಾಗುತ್ತಿದ್ದಂತೆಯೇ ರೈಲ್ವೆ ಪ್ರಯಾಣಿಕರ ಸೇವೆಗಳಿಗಿಂತಲೂ ಕಲ್ಲಿದ್ದಲು ರೇಕ್ ಗಳ ಸಾಗಣೆಗೆ ಹೆಚ್ಚು ಆದ್ಯತೆ ನೀಡುವ ಅನಿವಾರ್ಯತೆ ಎದುರಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ 5 ವರ್ಷಗಳಲ್ಲಿ 58 ಸೂಪರ್ ಕ್ರಿಟಿಕಲ್ ಹಾಗೂ 68 ಕ್ರಿಟಿಕಲ್ ಯೋಜನೆಗಳನ್ನು ರೈಲ್ವೆ ಪೂರ್ಣಗೊಳಿಸಬೇಕಿದ್ದು 1,15,000 ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಇದಾಗಿದೆ ಆದ್ದರಿಂದ ರೈಲ್ವೆ ಜಾಲದಾದ್ಯಂತ ಆದ್ಯತೆಯ ಮೇರೆಗೆ ದುರಸ್ತಿ ಕಾರ್ಯಕ್ರಮ ಹಾಗೂ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇದರಿಂದ ದೇಶಾದ್ಯಂತ, ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಾಗಿ ರೈಲು ಪ್ರಯಾಣಿಕರಿಗೆ ನಕಾರಾತ್ಮಕ ಪರಿಣಾಮ ಉಂಟಾಗಿತ್ತು. ಬಿಡುವಿಲ್ಲದ ಮಾರ್ಗಗಳಲ್ಲಿ ರೈಲುಗಳ ಕೊರತೆಯಿಂದಾಗಿ 2021-22 ರಲ್ಲಿ 1.60 ಕೋಟಿಗೂ ಹೆಚ್ಚಿನ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ ಹೊರತಾಗಿಯೂ ಪ್ರಯಾಣಿಸಲು ಸಾಧ್ಯವಾಗಲಿಲ್ಲ.