ಪಾಟ್ನಾ: ಬಿಹಾರದ ಎನ್ ಡಿಎ ಮೈತ್ರಿಕೂಟದಲ್ಲಿ ಎಲ್ಲವೂ ಚೆನ್ನಾಗಿದೆ. ಬಿಜೆಪಿ ಮತ್ತು ಜೆಡಿಯು ನಡುವಿನ ಭಿನ್ನಾಭಿಪ್ರಾಯಗಳ ಹೊರತಾಗಿಯೂ, ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ತಮ್ಮ ಪ್ರಸ್ತುತ ಅವಧಿಯನ್ನು ಪೂರ್ಣಗೊಳಿಸುತ್ತಾರೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪ್ರತಿಪಾದಿಸಿದರು.
ರಾಷ್ಟ್ರಪತಿ ಚುನಾವಣೆಯ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಪರವಾಗಿ ಪ್ರಚಾರದ ಭಾಗವಾಗಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗಿನ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಧರ್ಮೇಂದ್ರ ಪ್ರಧಾನ್, ಬಿಹಾರದಲ್ಲಿನ ಪ್ರಸ್ತುತ ಎನ್ ಡಿಎ ಮೈತ್ರಿ ಕೂಟದಲ್ಲಿ ಬಿಜೆಪಿ ಯಾವುದೇ ರೀತಿಯಲ್ಲೂ ಗೊಂದಲ ಮಾಡಲ್ಲ, ಜೆಡಿಯು ಎನ್ ಡಿಎ ಮೈತ್ರಿಕೂಟದ ಮೈತ್ರಿ ಪಕ್ಷವಾಗಿದೆ ಎಂದರು.
ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ವಿರುದ್ಧ ಬಿಹಾರದ ಬಿಜೆಪಿ ಮುಖಂಡರು ಯಾವುದೇ ಹೇಳಿಕೆ ನೀಡದಂತೆ ಕೇಂದ್ರದ ವರಿಷ್ಠರಿಂದ ತಡೆಯಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು.
ಬಿಹಾರ ಸರ್ಕಾರದಲ್ಲಿ ಬಿಜೆಪಿ ಸಚಿವರ ಖಾತೆ ಬದಲಾವಣೆ, ಮುಂಬರುವ ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿ ಚುನಾವಣೆ ಕುರಿತಂತೆ ಧರ್ಮೇಂದ್ರ ಪ್ರಧಾನ್ ಮತ್ತು ನಿತೀಶ್ ಕುಮಾರ್ ಮಾತುಕತೆ ನಡೆಸಿರುವ ಸಾಧ್ಯತೆಯಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.