HEALTH TIPS

2026ರವರೆಗೂ ಜಿಎಸ್​ಟಿ ಪರಿಹಾರ

 ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಂಡಳಿ ಸಭೆಗೆ ಕೆಲವು ದಿನ ಬಾಕಿರುವ ಬೆನ್ನಿಗೆ ಜಿಎಸ್​ಟಿ ಪರಿಹಾರ ಲೆವಿಯನ್ನು 2026ರ ಮಾರ್ಚ್ ವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಶುಕ್ರವಾರ ವಿಶೇಷ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಆದರೆ, ಈ ಪರಿಹಾರ ಸೌಲಭ್ಯ ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದೆ. ಹಿಂದೆ ರಾಜ್ಯಗಳಿಗೆ ನೀಡಲಾದ ಆಶ್ವಾಸನೆಯಂತೆ ಪಡೆಯಲಾದ ಸಾಲಗಳ ಮರುಪಾವತಿಗೆ ಅನುಕೂಲವಾಗಲು ಪರಿಹಾರ ಲೆವಿ ವಿಸ್ತರಣೆ ಒದಗಿಸಲಾಗಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿನ ಸಾಲಗಳು ಮತ್ತು ರಾಜ್ಯಗಳಿಗೆ ಪಾವತಿಸಲಾದ ಪರಿಹಾರ ಬಾಕಿ ಸರಿದೂಗಿಸಲು ಈ ವಿಸ್ತರಣೆ ನೀಡಲಾಗಿದೆ ಎಂದು ಹೇಳಿದೆ.

2017ರ ಜಿಎಸ್​ಟಿ (ರಾಜ್ಯಗಳಿಗೆ ಪರಿಹಾರ) ಕಾನೂನಿನ 8ನೇ ಸೆಕ್ಷನ್​ನ ಉಪಸೆಕ್ಷನ್ (1)ರ ಅನ್ವಯ ವಿಸ್ತರಣೆ ನೀಡಲಾಗಿದೆ. 2022ರ ಮೇ ಮತ್ತು ಜೂನ್ ತಿಂಗಳಲ್ಲಿ ರಾಜ್ಯಗಳಿಗೆ ಬಾಕಿಯಿರುವ ಪರಿಹಾರ ಒದಗಿಸಲೂ ಈ ವಿಸ್ತರಣೆ ನೆರವಾಗಲಿದೆ. ಕೆಲವು ನಿರ್ದಿಷ್ಟ ಸರಕು ಮತ್ತು ಸೇವೆಗಳ ಮೇಲಿನ ಜಿಎಸ್​ಟಿ ಪರಿಹಾರ ಮೇಲಿನ ಲೆವಿಯನ್ನು ಆಗಲೇ 2026ರ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ. 2021ರ ಸೆಪ್ಟೆಂಬರ್​ನಲ್ಲಿ ನಡೆದ ಜಿಎಸ್​ಟಿ ಮಂಡಳಿ ಸಭೆಯಲ್ಲಿ ಒಪ್ಪಿದಂತೆ ವಿಸ್ತರಣೆಯನ್ನು ಪ್ರಕಟಿಸಲಾಗಿದೆ.

ಕರೊನಾ ಸಾಂಕ್ರಾಮಿಕದ ವೇಳೆ ಜಿಎಸ್​ಟಿ ಸಂಗ್ರಹದಲ್ಲಿ ಇಳಿಮುಖವಾದ ಕಾರಣ ರಾಜ್ಯಗಳಿಗೆ ಪಾವತಿಸಬೇಕಾದ ಪರಿಹಾರ ದಲ್ಲಿನ ಕೊರತೆ ಉಂಟಾಯಿತು. ಇದನ್ನು ಸರಿದೂಗಿಸಲು ಕೇಂದ್ರ ಸರ್ಕಾರ 2020-21ರಲ್ಲಿ 1.10 ಲಕ್ಷ ಕೋಟಿ ರೂಪಾಯಿ ಮತ್ತು 2021-22ರಲ್ಲಿ 1.59 ಲಕ್ಷ ಕೋಟಿ ರೂಪಾಯಿ ಸಾಲವನ್ನು ಆರ್​ಬಿಐನಿಂದ ಪಡೆದಿತ್ತು. ಇದರ ಬಡ್ಡಿ 75 ಸಾವಿರ ಕೋಟಿ ರೂಪಾಯಿಯನ್ನು 2021-22ರಲ್ಲಿ ಮತ್ತು ಪ್ರಸ್ತುತ ಹಣಕಾಸು ವರ್ಷದಲ್ಲಿ 14 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಪಾವತಿಸಿದೆ. 2023-24ರಲ್ಲಿ ಸಾಲದ ಮೂಲ ಹಣ ಮರುಪಾವತಿ ಆರಂಭವಾಗಲಿದ್ದು, 2026ರವರೆಗೆ ಇದು ಮುಂದುವರಿಯುತ್ತದೆ.

ಐದು ವರ್ಷ ಪರಿಹಾರ: ರಾಜ್ಯ ಮಟ್ಟದ ಬಹುತೇಕ ತೆರಿಗೆಗಳ ವಿಲೀನದ ಕಾರಣ ತೆರಿಗೆ ವರಮಾನ ನಷ್ಟ ಸರಿದೂಗಿಸಲು ಐದು ವರ್ಷಗಳ ರಾಜ್ಯಗಳಿಗೆ ಜಿಎಸ್​ಟಿ ಪರಿಹಾರವನ್ನು ಕೇಂದ್ರ ಘೋಷಿಸಿತ್ತು. ಈ ಐದು ವರ್ಷ ಪರಿಹಾರ ಸೆಸ್ ನಿಧಿಯಿಂದ ಹಣ ಒದಗಿಸಲಾಗುತ್ತದೆ ಎಂದು ಕೇಂದ್ರ ಹೇಳಿತ್ತು. ಇದು 2017ರಲ್ಲಿ ಜಿಎಸ್​ಟಿ ಜಾರಿಯಾದಾಗಿನಿಂದ 2022ರ ಜೂನ್ 30ರವರೆಗೆ ಚಾಲ್ತಿಯಲ್ಲಿ ಇದೆ. ಪ್ರತಿ ವರ್ಷ ಶೇಕಡ 14 ಬೆಳವಣಿಗೆ ಸಾಧಿಸಲಾಗುತ್ತದೆಂದು ಕೇಂದ್ರ ಸರ್ಕಾರ ಆಶ್ವಾಸನೆ ನೀಡಿತ್ತು. ಈ ಹೊಸ ವ್ಯವಸ್ಥೆಗೆ ರಾಜ್ಯಗಳನ್ನು ಆಕರ್ಷಿಸುವ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಈ ವರ್ಷದ ಜುಲೈ 1ರಿಂದ ರಾಜ್ಯಗಳಿಗೆ ಜಿಎಸ್​ಟಿ ಪರಿಹಾರ ಒದಗಿಸಲಾಗುವುದಿಲ್ಲ ಎಂದು ಕೇಂದ್ರ ಈ ಹಿಂದೆ ಹೇಳಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries