ತಿರುವನಂತಪುರ: ಶಾಲೆಯಿಂದ ಮಧ್ಯಾಹ್ನದ ಊಟ ಸೇವಿಸಿದ ಮಕ್ಕಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ವಿಳಿಂಜಂ ವೆಂಗನೂರು ಉಚ್ಚಕ್ಕಡ ಎಲ್‍ಎಂಎಸ್ ಎಲ್‍ಪಿ ಶಾಲೆಯ ಸುಮಾರು 25 ವಿದ್ಯಾರ್ಥಿಗಳು ವಿಷಬಾಧೆಗೊಳಗಾಗಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳಿಗೆ ಆಹಾರ ವಿಷವಾಗಿದೆ ಎಂದು ಶಂಕಿಸಲಾಗಿದೆ.
ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಾಲೆಗೆ ಐದು ದಿನಗಳ ಕಾಲ ಮುಚ್ಚುವಂತೆ ಆದೇಶಿಸಿದರು. ವಿಳಿಂಜಂ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜವಾಹರ್ ಹಾಗೂ ಆರೋಗ್ಯ ನಿರೀಕ್ಷಕ ಜಯಚಂದ್ರ ನೇತೃತ್ವದಲ್ಲಿ ಆರೋಗ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.
ನಿನ್ನೆ ಊಟ ಮುಗಿಸಿ ಮನೆಗೆ ಬಂದಿದ್ದ ಮಕ್ಕಳಿಗೆ ಅಸ್ವಸ್ಥತೆ ಕಂಡುಬಂತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಇಬ್ಬರು ಮಕ್ಕಳಿಗೆ ಇನ್ನೂ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರನ್ನು ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಶಾಲೆಯ ಆಹಾರ ಸೇವಿಸಿದವರಿಗೂ, ಸೇವಿಸದವರಿಗೂ ಹೊಟ್ಟೆ ನೋವು ಸಹಿತ ಅಸ್ವಸ್ಥತೆ, ವಾಂತಿ ಬೇಧಿ ಕಂಡುಬಂದಿದೆ ಎಂದು ಮುಖ್ಯೋಪಾಧ್ಯಾಯಿನಿ ವೈ.ಎಸ್. ಸಾಜಿ ಹೇಳಿರುವÀರು. ಮಕ್ಕಳಿಗೂ ವೈರಸ್ ಹರಡಿರುವ ಶಂಕೆ ಇದೆ ಎಂದು ಬಲರಾಮಪುರಂ ಎಇಒ ಲೀನಾ ಸ್ಪಷ್ಟಪಡಿಸಿದ್ದಾರೆ.
ವಿಳಿಂಜಂ ವೆಂಗನೂರ್ ಎಲ್.ಎಂ.ಎಸ್ ಎಲ್ಪಿ ಶಾಲೆಯು ಸುಮಾರು 400 ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಯಾಗಿದೆ. ಹೆಚ್ಚಿನ ಮಕ್ಕಳು ವೈರಸ್‍ಗೆ ತುತ್ತಾಗುವುದನ್ನು ತಡೆಯಲು ಮುಂಜಾಗ್ರತಾ ಕ್ರಮವಾಗಿ ಶಾಲೆಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.