ಕಾಸರಗೋಡು: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶಾನುಸಾರ ಕಾಸರಗೋಡು ಮತ್ತು ಹೊಸದುರ್ಗ ನ್ಯಾಯಾಲಯಗಳಲ್ಲಿ ಜೂನ್ 26ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ.
ಅದಾಲತ್‍ಗೆ ಇದುವರೆಗೆ 4324 ಪ್ರಕರಣಗಳನ್ನು ನಿರ್ದೇಶಿಸಲಾಗಿದೆ. ನೆಗೋಷಿಯೇಬಲ್ ಇನ್‍ಸ್ಟ್ರುಮೆಂಟ್ಸ್ ಸೆಕ್ಷನ್ 138ರ ಪ್ರಕಾರದ ಪ್ರಕರಣಗಳು, ಕಾರ್ಮಿಕ ವಿವಾದಗಳು, ವಿದ್ಯುತ್, ನೀರಿನ ತೆರಿಗೆ ಸಂಬಂಧಿ ಪ್ರಕರಣಗಳು ಮತ್ತು ಮಾತುಕತೆ ಮೂಲಕ ಪರಿಹರಿಸಬಹುದಾದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ದೂರುಗಳನ್ನು ನ್ಯಾಯಾಲಯದಲ್ಲಿ ಪರಿಗಣಿಸಲಾಗುವುದು. ಇದಲ್ಲದೆ, ವಿವಿಧ ನ್ಯಾಯಾಲಯಗಳಲ್ಲಿ ಕ್ರಿಮಿನಲ್ ಪ್ರಕರಣಗಳು, ಮೋಟಾರು ವಾಹನ ನಷ್ಟ ಪರಿಹಾರ ಪ್ರಕರಣಗಳು, ಚೆಕ್ ಪ್ರಕರಣಗಳು, ಬ್ಯಾಂಕ್ ಸಾಲ, ಕಾರ್ಮಿಕ ಪ್ರಕರಣಗಳು,ಕೌಟುಂಬಿಕ ನ್ಯಾಯಾಲಯಗಳಲ್ಲಿನ ವಿಚ್ಛೇದನ ಪ್ರಕರಣಗಳಲ್ಲದೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕರಣಗಳು, ಸೇವಾ ಸಂಬಂಧಿತ ಪ್ರಕರಣಗಳು, ಕೇರಳ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ದಾಖಲಾದ ಪ್ರಕರಣಗಳು ಮತ್ತು ಸಿವಿಲ್ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಹ ಅದಾಲತ್‍ನಲ್ಲಿ ಪರಿಗಣಿಸಲಾಗುವುದು. ಜತೆಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ಪ್ರಸಕ್ತ ಇರುವ ಸಣ್ಣಪುಟ್ಟ ಪ್ರಕರಣಗಳ ತ್ವರಿತ ವಿಲೇವಾರಿಗೆ ಇದೇ ದಿನ ವಿಶೇಷ ಕಲಾಪ ನಡೆಯಲಿದೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04672207170, 04994 256189)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.