ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರ ಬಿಡುಗಡೆಯಾದ ಕೇವಲ 4 ದಿನದಲ್ಲಿ ರೂ.27 ಕೋಟಿ ಗಳಿಕೆ ಮಾಡಿದೆ ಎಂದು ತಿಳಿದುಬಂದಿದೆ.
ಕನ್ನಡ, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರಕ್ಕೆ ಎಲ್ಲಾ ಭಾಷೆಗಳಲ್ಲೂ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. ಶುಕ್ರವಾರ, ಶನಿವಾರ, ಭಾನುವಾರ ಚಿತ್ರದ ಬಹುತೇಕ ಪ್ರದರ್ಶನಗಳು ಹೌಸ್ ಫುಲ್ ಆಗಿದ್ದವು, ಸೋಮವಾರ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ಐದು ವರ್ಷಗಳ ನಮ್ಮ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎಂದು ನಿರ್ದೇಶಕ ಕಿರಣ್ ರಾಜ್ ಅವರು ಹೇಳಿದ್ದಾರೆ.
ಬಾಕ್ಸ್ ಆಫಿಸ್ ಸಂಖ್ಯೆಯನ್ನು ಬಿಟ್ಟುಬಿಡಿ. ಸೋಮವಾರ ಕೂಡ ಜನರು ಕುಟುಂಬ ಸಮೇತರಾಗಿ ಬಂದು ಚಿತ್ರವನ್ನು ನೋಡುತ್ತಿದ್ದರು. ಇದು ನನಗೆ ಖುಶಿ ತಂದಿದೆ. ವಾರಾಂತ್ಯದ ಪ್ರದರ್ಶನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತೆಲುಗು ವಿತರಕರು ಸಂತೋಷಪಟ್ಟಿದ್ದಾರೆ. ಈ ವಾರ ಕೂಡ ಉತ್ತಮ ಪ್ರದರ್ಶನಗೊಳ್ಳುವ ನಿರೀಕ್ಷೆಗಳಿವೆ. ಕೇರಳದಲ್ಲಿ ಮೂರು ಮಲಯಾಳಂ ಚಿತ್ರ ಕೂಡ ಚಾರ್ಲಿ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿದೆ. ಆದರೂ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಬಂದಿದೆ. ತಮಿಳುನಾಡು, ಪುಣೆಯಲ್ಲು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಚಿತ್ರದ ಕನ್ನಡ ಆವೃತ್ತಿಯ ಡಿಜಿಟಲ್ ಹಕ್ಕುಗಳನ್ನು ವೂಟ್‌ಗೆ ಮಾರಾಟ ಮಾಡಲಾಗಿದ್ದು, ಚಿತ್ರದ ಇತರ ಆವೃತ್ತಿಗಳ ಹಕ್ಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದರು.
777 ಚಾರ್ಲಿ ಎರಡನೇ ಭಾಗ ಬರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಪ್ರಸ್ತುತ ಅಂತಹ ಆಲೋಚನೆಗಳಿಲ್ಲ. 777 ಚಾರ್ಲಿ ಅವತರಣಿಯನ್ನು ಯಾವಾಗ ಬೇಕಾದರೂ ಮಾಡಬಹುದು. ಪ್ರಸ್ತುತ ನನ್ನ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಈ ಚಿತ್ರಗಳ ಕಾರ್ಯ ಪೂರ್ಣಗೊಂಡರೆ, ಆ ಬಗ್ಗೆ ಚಿಂತನೆ ನಡೆಸುತ್ತೇನೆಂದು ತಿಳಿಸಿದ್ದಾರೆ.
777 ಚಾರ್ಲಿ, ಪರಂವಾ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದ್ದು, ಚಿತ್ರಕ್ಕೆ ಕಿರಣ್‌ರಾಜ್ ಕಥೆ ಬರೆದು ನಿರ್ದೇಶಿಸಿದ್ದಾರೆ ಹಾಗೂ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ, ರಾಜ್ ಬಿ ಶೆಟ್ಟಿ, ಸಂಗೀತಾ ಶೃಂಗೇರಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ನೋಬಿನ್ ಪಾಲ್ ನೀಡಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.