ಮುಂಬೈ: ಮಹಾ ವಿಕಾಸ್ ಅಘಾಡಿಯ ಪ್ರಮುಖ ಪಕ್ಷ ಶಿವಸೇನೆಯ ಶಾಸಕರು ಬಂಡೆದ್ದಿರುವುದರಿಂದ ಇದೀಗ ಮಹಾರಾಷ್ಟ್ರದಲ್ಲಿ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಎದ್ದಿದೆ. ಬಂಡಾಯ ಶಾಸಕರು ಪಕ್ಷ ತೊರೆದರೆ ಉದ್ಧವ್ ಸರ್ಕಾರದ ಭವಿಷ್ಯವೇನು? ಬಿಜೆಪಿ ಮತ್ತೆ ಅಧಿಕಾರದ ಪ್ರಯತ್ನ ನಡೆಸುವುದೇ?
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸದ್ಯ 287 ಸದಸ್ಯರಿದ್ದಾರೆ. ಶಿವಸೇನೆ ಶಾಸಕ ರಮೇಶ್ ಲಟ್ಕೆ ಇತ್ತೀಚೆಗೆ ಮೃತಪಟ್ಟಿದ್ದರು. ಹೀಗಾಗಿ, ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಅಧಿಕಾರದಲ್ಲಿ ಇರಲು 144 ಶಾಸಕರ ಬಲ ಬೇಕು.
ಮಹಾ ವಿಕಾಸ ಅಘಾಡಿ ಮತ್ತು ಬಿಜೆಪಿ ಹೊರತುಪಡಿಸಿ 29 ಮಂದಿ ಸಣ್ಣ ಪಕ್ಷಗಳ ಮತ್ತು ಪಕ್ಷೇತರ ಶಾಸಕರಿದ್ಧಾರೆ. ಈ ಶಾಸಕರು ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಅತ್ಯಂತ ಪ್ರಮುಖರಾಗಿದ್ದಾರೆ. ಈ ಶಾಸಕರು ಸರ್ಕಾರದ ಅಳಿವು ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಎಂವಿಎ ಬಲ: ಶಿವಸೇನೆ(55), ಎನ್‌ಸಿಪಿ(53) ಮತ್ತು ಕಾಂಗ್ರೆಸ್(44) ಜೊತೆಗೆ ಸಣ್ಣ ಪಕ್ಷಗಳು ಹಾಗು ಪಕ್ಷೇತರ ಶಾಸಕರ ಬೆಂಬಲ ಸೇರಿ ಒಟ್ಟು 169 ಶಾಸಕರ ಬೆಂಬಲವಿದೆ.
ಬಿಜೆಪಿಯ 106 ಶಾಸಕರಿದ್ದು, ಸಣ್ಣ ಪಕ್ಷಗಳು ಮತ್ತು ಕೆಲ ಪಕ್ಷೇತರರ ಬೆಂಬಲ ಸೇರಿ ಸುಮಾರು 114 ಸದಸ್ಯ ಬಲವಿದೆ. ಐವರು ಶಾಸಕರು ಯಾವುದೇ ಬಣ ಸೇರದೇ ತಟಸ್ಥರಾಗಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ 25ಕ್ಕೂ ಹೆಚ್ಚು ಶಿವಸೇನೆ ಶಾಸಕರು ಏಕನಾಥ್ ಶಿಂಧೆ ನೇತೃತ್ವದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ತವರಾದ ಗುಜರಾತ್ ರಾಜ್ಯದಲ್ಲಿ ಬೀಡುಬಿಟ್ಟಿದ್ದಾರೆ. ಹೀಗಾಗಿ, ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರದ ಭವಿಷ್ಯ ತೂಗುಯ್ಯಾಲೆಯಲ್ಲಿದೆ.
ಈ ಹಿಂದೆ ಮಧ್ಯಪ್ರದೇಶ, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ಸರ್ಕಾರಗಳನ್ನು ಉರುಳಿಸಿದ ಬಿಜೆಪಿಯ ಹಿಂದಿನ ದಾಖಲೆಯನ್ನು ಗಮನಿಸಿದರೆ ಅಘೋಷಿತ 'ಆಪರೇಷನ್ ಕಮಲ' ವು ಎಂವಿಎ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೀಗಾಗಿ, ತಮ್ಮ ಬೆಂಬಲಿತ ಸಣ್ಣ ಪಕ್ಷಗಳ ಮತ್ತು ಪಕ್ಷೇತರ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಮತ್ತು ಸೂರತ್‌ಗೆ ತೆರಳಿರುವ ಬಂಡಾಯ ಶಾಸಕರನ್ನು ಸಂಪರ್ಕಿಸುವ ಯತ್ನದಲ್ಲಿ ಎಂವಿಎ ತೊಡಗಿದೆ.
ಶಿವಸೇನೆಯ ಸಂಜಯ್ ರಾವುತ್, ಕಾಂಗ್ರೆಸ್‌ನ ಪೃಥ್ವಿರಾಜ್ ಚವಾಣ್, ಅಶೋಕ್ ಚವಾಣ್ ಮತ್ತು ಇತರರು ಸರ್ಕಾರಕ್ಕೆ ಸದ್ಯ ಯಾವುದೇ ಧಕ್ಕೆ ಇಲ್ಲ ಎಂದಿದ್ದಾರೆ.
ಈ ಮಧ್ಯೆ, ಶಿಂಧೆ ಇಂದು ಸಂಜೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಲು ಅಹಮದಾಬಾದ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ, ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವಿಸ್ ಕೂಡ ಅಲ್ಲಿಗೆ ಹೋಗುತ್ತಿದ್ದಾರೆ ಎನ್ನಲಾಗಿದೆ.