ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದ ಮೇರೆಗೆ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಶುಕ್ರವಾರ ಪ್ರಾರ್ಥನೆಯಲ್ಲಿ ಪಾಲ್ಗೊಂಡವರೊಂದಿಗೆ ನೂರಾರು ಮಂದಿ ಒತ್ತಾಯಿಸಿದ ನಂತರ ಜಾಮಾ ಮಸೀದಿ ಹೊರಗಡೆ ಪ್ರತಿಭಟನೆ ಭುಗಿಲೆದಿತು.
ಜಾಮಾ ಮಸೀದಿಯ ಮೆಟ್ಟಿಲುಗಳ ಮೇಲೆ ಭಿತ್ತಿಪತ್ರ ಹಿಡಿದು ಕುಳಿತಿದ್ದ ಅಪಾರ ಪ್ರಮಾಣದ ಪ್ರತಿಭಟನಾಕಾರರು, ನೂಪುರ್ ಶರ್ಮಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ತಾಸಿನ ಬಳಿಕ ಕೆಲ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರೆ, ಮತ್ತೆ ಕೆಲವರು ಪ್ರತಿಭಟನೆ ಮುಂದುವರೆಸಿದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 10-15 ನಿಮಿಷಗಳ ಕಾಲ ಶಾಂತಯುತವಾಗಿ ಪ್ರತಿಭಟನೆ ನಡೆಸಲಾಯಿತು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಪ್ರಚೋದನಾಕಾರಿ ಭಾಷಣ ಆರೋಪದ ಮೇರೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಯತಿ ನರಸಿಂಗನಂದ್ ಸೇರಿದಂತೆ 31 ಜನರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹಿಂಸಾಚಾರ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ 30 ಎಐಎಂಐಎಂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಾಕ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರೆ ಸ್ಥಾನದಿಂದ ನೂಪುರ್ ಶರ್ಮಾ ಹಾಗೂ ದೆಹಲಿ ಮಾಧ್ಯಮ ಘಟಕದ ಮುಖ್ಯಸ್ಥ ಸ್ಥಾನದಿಂದ ನವೀನ್ ಕುಮಾರ್ ಜಿಂದಾಲ್ ಅವರನ್ನು ಜೂನ್ 5 ರಂದು ಬಿಜೆಪಿ ಅಮಾನತುಪಡಿಸಿತು.