ಜೂನ್ 30ರಿಂದ ಆಷಾಢ ಮಾಸ ಪ್ರಾರಂಭ. ಇದು ಜುಲೈ 28ರವರೆಗೆ ಇರಲಿದ್ದು, ಸಾಮಾನ್ಯವಾಗಿ ಇದನ್ನು ಅಶುಭ ಮಾಸ ಎಂದು ಕರೆಯಲಾಗುವುದು. ಈ ಸಮಯದಲ್ಲಿ ಯಾವುದೇ ಮದುವೆ, ಗೃಹಪ್ರವೇಶ, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಶುಭ ಕಾರ್ಯಗಳೆಲ್ಲಾ ನಡೆಯುವುದಿಲ್ಲ. ಇದಕ್ಕೆ ನಾನಾ ಕಾರಣಗಳಿದ್ದರೂ, ಇತರ ಮಾಸಕ್ಕೆ ಹೋಲಿಸಿದರೆ, ಈ ಆಷಾಢ ಮಾಸದಲ್ಲಿ ಶುಭ ಸಮಾರಂಭಗಳು ಕಡಿಮೆ ಇರೋದು ಮಾತ್ರ ನಿಜ.
ಆದರೆ ಬ್ರಾಹ್ಮಣ ಸಮುದಾಯವರು ಮಾತ್ರ ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವ ವಾಡಿಕೆ ಇದೆ.ಪರಿಸ್ಥಿತಿ ಹೀಗಿದ್ದರೂ, ಆಷಾಢ ಮಾಸದಲ್ಲಿ ಕೆಲವೊಂದು ಹಬ್ಬ ಹಾಗೂ ವ್ರತಗಳನ್ನು ಆಚರಣೆ ಮಾಡಲಾಗುವುದು. ಅಂತಹ ಹಬ್ಬಗಳು ಹಾಗೂ ಆಚರಣೆಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ. ಆಷಾಢ ಮಾಸವು ಜೂನ್ 30 ರಿಂದ ಪ್ರಾರಂಭವಾಗಿ ಜುಲೈ 28, 2022 ರವರೆಗೆ ಇರುತ್ತದೆ.
ಆಷಾಢ ಮಾಸದಲ್ಲಿ ಪ್ರಮುಖ ಹಬ್ಬಗಳು ಮತ್ತು ವ್ರತಗಳನ್ನು ಈ ಕೆಳಗೆ ನೀಡಲಾಗಿದೆ: ಜೂನ್ 24 ಯೋಗಿನಿ ಏಕಾದಶಿ ಯೋಗಿನಿ ಏಕಾದಶಿಯು ವಿಷ್ಣುವಿನ ಆಶೀರ್ವಾದ ಪಡೆಯಲು ಆಚರಿಸಲಾಗುವ ಇಪ್ಪತ್ತನಾಲ್ಕು ಏಕಾದಶಿ ವ್ರತಗಳಲ್ಲಿ ಒಂದಾಗಿದೆ. ನಿರ್ಜಲ ಏಕಾದಶಿಯ ನಂತರ ಮತ್ತು ದೇವಶಯನಿ ಏಕಾದಶಿಯ ಮೊದಲು ಬರುವ ಏಕಾದಶಿಯನ್ನು ಯೋಗಿನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿಯಂದು ಉಪವಾಸ ಮಾಡುವುದರಿಂದ 88 ಸಾವಿರ ಬ್ರಾಹ್ಮಣರಿಗೆ ಅನ್ನ ನೀಡುವುದಕ್ಕೆ ಸಮ ಎಂದು ನಂಬಲಾಗಿದೆ. ಏಕಾದಶಿ ತಿಥಿ ಆರಂಭ -ಜೂನ್ 23, 2022 ರಂದು 09:41 PM ಏಕಾದಶಿ ತಿಥಿ ಮುಕ್ತಾಯ -ಜೂನ್ 24, 2022 ರಂದು 11:12 PM
ಜುಲೈ 1 ಪುರಿ ಜಗನ್ನಾಥ ಯಾತ್ರೆ ಜಗನ್ನಾಥ ರಥಯಾತ್ರೆಯು ಒರಿಸ್ಸಾ ರಾಜ್ಯದ ಪುರಿಯಲ್ಲಿ ನಡೆಯುವ ಭಗವಾನ್ ಜಗನ್ನಾಥನಿಗೆ ಸಂಬಂಧಿಸಿದ ಒಂದು ಪ್ರಸಿದ್ಧ ಹಿಂದೂ ಹಬ್ಬವಾಗಿದೆ. ಜಗನ್ನಾಥನನ್ನು ಮುಖ್ಯವಾಗಿ ಪುರಿ ನಗರದಲ್ಲಿ ಪ್ರಸಿದ್ಧ ಜಗನ್ನಾಥ ದೇವಾಲಯದಲ್ಲಿ ಪೂಜಿಸಲಾಗುತ್ತದೆ. ಇದು ಆಷಾಢ ಮಾಸದ ಶುಕ್ಲ ಪಕ್ಷದ ದ್ವಿತೀಯ ತಿಥಿಯಂದು ಸಾಮಾನ್ಯವಾಗಿ ನಡೆಯುತ್ತದೆ. ದ್ವಿತೀಯ ತಿಥಿ ಆರಂಭ -ಜೂನ್ 30, 2022 ರಂದು 10:49 AM ದ್ವಿತೀಯ ತಿಥಿ ಕೊನೆಗೊಳ್ಳುತ್ತದೆ -ಜುಲೈ 01, 2022 ರಂದು 01:09 PM
ಜುಲೈ 9 ದೇವಶಯನಿ ಏಕಾದಶಿ ದೇವಶಯನಿ ಏಕಾದಶಿಯು ವಿಷ್ಣುವಿನ ಆಶೀರ್ವಾದವನ್ನು ಪಡೆಯಲು ಆಚರಿಸಲಾಗುವ ಇಪ್ಪತ್ತನಾಲ್ಕು ಏಕಾದಶಿ ವ್ರತಗಳಲ್ಲಿ ಒಂದಾಗಿದ್ದು, ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯಾನಿ ಏಕಾದಶಿ ಎಂದು ಕರೆಯಲಾಗುತ್ತದೆ. ವಿಷ್ಣುವು ಈ ದಿನದಂದು ಮಲಗಿ, ನಾಲ್ಕು ತಿಂಗಳ ನಂತರ ಪ್ರಬೋಧಿನಿ ಏಕಾದಶಿಯಂದು ಎಚ್ಚರಗೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಏಕಾದಶಿ ತಿಥಿ ಆರಂಭ -ಜುಲೈ 09, 2022 ರಂದು 04:39 PM ಏಕಾದಶಿ ತಿಥಿ ಮುಕ್ತಾಯ -ಜುಲೈ 10, 2022 ರಂದು 02:13 PM
ಜುಲೈ 9 ಗೌರಿ ವ್ರತ ಆರಂಭ ಗೌರಿ ವ್ರತವು ಪಾರ್ವತಿ ದೇವಿಗೆ ಸಮರ್ಪಿತವಾದ ಮಹತ್ವದ ಉಪವಾಸದ ಅವಧಿಯಾಗಿದೆ. ಈ ಗೌರಿ ವ್ರತವನ್ನು ಮುಖ್ಯವಾಗಿ ಅವಿವಾಹಿತ ಹುಡುಗಿಯರು ಒಳ್ಳೆಯ ಗಂಡ ಸಿಗಲಿ ಎಂಬ ಉದ್ದೇಶದಿಂದ ಮಾಡುತ್ತಾರೆ. ಗೌರಿ ವ್ರತವನ್ನು ಆಷಾಢ ಮಾಸದಲ್ಲಿ 5 ದಿನಗಳ ಕಾಲ ಆಚರಿಸಲಾಗುತ್ತದೆ. ಇದು ಶುಕ್ಲ ಪಕ್ಷ ಏಕಾದಶಿಯಂದು ಪ್ರಾರಂಭವಾಗಿ, ಐದು ದಿನಗಳ ನಂತರ ಹುಣ್ಣಿಮೆ ದಿನ ಗುರು ಪೂರ್ಣಿಮೆಯ ದಿನ ಕೊನೆಗೊಳ್ಳುತ್ತದೆ. ಏಕಾದಶಿ ತಿಥಿ ಆರಂಭ -ಜುಲೈ 09, 2022 ರಂದು 04:39 PM ಏಕಾದಶಿ ತಿಥಿ ಮುಕ್ತಾಯ -ಜುಲೈ 10, 2022 ರಂದು 02:13 PM
ಜುಲೈ 13 ಗುರು ಪೂರ್ಣಿಮಾ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಸಾಂಪ್ರದಾಯಿಕವಾಗಿ ಈ ದಿನವನ್ನು ಗುರು ಪೂಜೆಗಾಗಿ ಮೀಸಲಿಡಲಾಗಿದೆ. ಈ ದಿನ ಶಿಷ್ಯರು ತಮ್ಮ ಗುರುಗಳಿಗೆ ಪೂಜೆ ಅಥವಾ ಗೌರವ ಸಲ್ಲಿಸುತ್ತಾರೆ. ಗುರು ಪೂರ್ಣಿಮೆಯನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯುತ್ತಾರೆ ಮತ್ತು ಈ ದಿನವನ್ನು ವೇದವ್ಯಾಸರ ಜನ್ಮದಿನವೆಂದು ಸ್ಮರಿಸಲಾಗುತ್ತದೆ. ಪೂರ್ಣಿಮಾ ತಿಥಿ ಆರಂಭ -ಜುಲೈ 13, 2022 ರಂದು ಬೆಳಗ್ಗೆ 04:00 ಪೂರ್ಣಿಮಾ ತಿಥಿ ಮುಕ್ತಾಯ -ಜುಲೈ 14, 2022 ರಂದು ಬೆಳಗ್ಗೆ 12:06
ಜುಲೈ 13 ಕೋಕಿಲ ವ್ರತ ಕೋಕಿಲ ವ್ರತವನ್ನು ಆಷಾಢ ಮಾಸದ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಈ ಕೋಕಿಲ ವ್ರತವನ್ನು ಪಾರ್ವತಿ ದೇವಿಗೆ ಮತ್ತು ಶಿವನಿಗೆ ಸಮರ್ಪಿಸಲಾಗಿದೆ. ಕೋಕಿಲಾ ಎಂಬ ಹೆಸರು ಕೋಗಿಲೆಯನ್ನು ಸೂಚಿಸುತ್ತದೆ ಮತ್ತು ಇದು ಸತಿ ದೇವಿಗೆ ಸಂಬಂಧಿಸಿದೆ. ಈ ದಿನ ವಿವಾಹಿತರು ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಪೂರ್ಣಿಮಾ ತಿಥಿ ಆರಂಭ -ಜುಲೈ 13, 2022 ರಂದು 04:00 AM ಪೂರ್ಣಿಮಾ ತಿಥಿ ಮುಕ್ತಾಯ -ಜುಲೈ 14, 2022 ರಂದು 12:06 AM
ಜುಲೈ 16 ಸಂಕಷ್ಟ ಚತುರ್ಥಿ ಸಂಕಷ್ಟಹರ ಚತುರ್ಥಿ ವ್ರತವನ್ನು ಗಣೇಶನಿಗೆ ಸಮರ್ಪಿಸಲಾಗಿದ್ದು, ಆಷಾಢ ಮಾಸದಲ್ಲಿ ಜುಲೈ 16 ರಂದು ಬಂದಿದೆ. ಚಂದ್ರೋದಯವು ರಾತ್ರಿ 9:56 ಕ್ಕೆ ಸಂಭವಿಸಲಿದೆ.
ಜುಲೈ 28 ಆಷಾಢ ಅಮಾವಾಸ್ಯೆ ಅಥವಾ ಅಮಾವಾಸ್ಯೆ ಅಥವಾ ಭೀಮನ ಅಮಾವಾಸ್ಯೆ: ಆಷಾಢ ಮಾಸದ ಅಮಾವಾಸ್ಯೆಯು ಜುಲೈ 27 ರಂದು ರಾತ್ರಿ 9:12 ಕ್ಕೆ ಪ್ರಾರಂಭವಾಗಿ, ಜುಲೈ 28, 2022 ರಂದು ರಾತ್ರಿ 11:25 ಕ್ಕೆ ಕೊನೆಗೊಳ್ಳುತ್ತದೆ. ಈ ಅಮಾವಾಸ್ಯೆಯನ್ನು ಭೀಮನ ಅಮಾವಾಸ್ಯೆ ಎಂದೂ ಸಹ ಕರೆಯುತ್ತಾರೆ. ಈ ದಿನ ಮಹಿಳೆಯರು ತಮ್ಮ ಗಂಡನ ಶ್ರೇಯಸ್ಸಿಗಾಗಿ ಉಪವಾಸ ಮಾಡುತ್ತಾರೆ. ಜುಲೈ 11 ಮತ್ತು ಜುಲೈ 25 ಪ್ರದೋಷ ವ್ರತ ಇದು ಶಿವನಿಗೆ ಸಮರ್ಪಿತವಾದ ದಿನವಾಗಿದ್ದು, ಈ ದಿನ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಉಪವಾಸ ಅಚರಿಸುತ್ತಾರೆ.