ತಿರುವನಂತಪುರ: ಮೈಕ್ ಬಳಸಿ ಅನೌನ್ಸ್ ಮೆಂಟ್ ಗೆ ಅನುಮತಿ ಪಡೆಯಬೇಕಾದರೆ ಇನ್ನು ದುಪ್ಪಟ್ಟು ಹಣ ನೀಡಬೇಕು.15 ದಿನಕ್ಕೆ ಇದ್ದ 330 ರೂ.ನಿಂದ 660 ರೂ.ಗೆ ಹೆಚ್ಚಿಸಲಾಗಿದೆ. ತೆರಿಗೆಯೇತರ ಆದಾಯದ ಹೆಚ್ಚಳದ ಭಾಗವಾಗಿ ಪೊಲೀಸರು ಸೇವಾ-ಶುಲ್ಕ ದರಗಳನ್ನು 10% ಹೆಚ್ಚಿಸಿದ್ದಾರೆ. ಸೇವಾ ಶುಲ್ಕವನ್ನು ಪರಿಷ್ಕರಿಸಲು ಡಿಜಿಪಿ ಅನಿಲ್ ಕಾಂತ್ ಅವರ ಶಿಫಾರಸಿಗೆ ಸರ್ಕಾರ ಅನುಮೋದನೆ ನೀಡಿದೆ.
ಇದರೊಂದಿಗೆ ಇಡೀ ಕೇರಳದಲ್ಲಿ ಮೈಕ್ ಅನೌನ್ಸ್ ಮಾಡಬೇಕಾದರೆ ರಾಜಕೀಯ ಪಕ್ಷಗಳು ದುಪ್ಪಟ್ಟು ಹಣ ನೀಡಬೇಕಾಗುತ್ತದೆ. ಐದು ದಿನಕ್ಕೆ ಪ್ರಸ್ತುತ ಪಾವತಿ 5,515 ರೂ.ಗಳು ಇದ್ದಿರುವುದು ಮುಂದೆ 11,030 ರೂ.ಏರಿಕೆಯಾಗಲಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನದಲ್ಲಿ ಮೈಕ್ ಘೋಷಣೆ ಮಾಡುವ ಮೊತ್ತವನ್ನು 555 ರೂ.ನಿಂದ 1,110 ರೂ.ಗೆ ಹೆಚ್ಚಿಸಲಾಗಿದೆ.
ಜತೆಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರದ ಶುಲ್ಕವನ್ನು 555 ರೂ.ನಿಂದ 619 ರೂ.ಗೆ ಹೆಚ್ಚಿಸಲಾಗಿದೆ. ಠಾಣಾಧಿಕಾರಿಗಳ ಸೇವೆ ಬೇಕಾದರೆ ನಾಲ್ಕು ತಾಸಿನ ಲೆಕ್ಕದಲ್ಲಿ ಪಾವತಿಸಬೇಕು. ಹಗಲು 3795, ರಾತ್ರಿ 4750 ರೂ. ಇರಲಿದೆ. ಪೊಲೀಸ್ ಠಾಣೆಯಲ್ಲಿ ಚಿತ್ರೀಕರಣ ಮಾಡಲು ದಿನಕ್ಕೆ 11,025 ರೂ.ನಿಂದ 33,100 ರೂ.ಗೆ ವರ್ಧಿಸಲಾಗುತ್ತದೆ. ಪೊಲೀಸ್ ಶ್ವಾನ ಸೇವೆಗೆ ದಿನಕ್ಕೆ 6,950 ರೂ., ವೈರ್ ಲೆಸ್ ಸೆಟ್ ಬಳಕೆಗೆ 2,315 ರೂ.ನಿಗದಿಪಡಿಸಲಾಗಿದೆ.
ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಫಿಂಗರ್‌ಪ್ರಿಂಟ್ ಬ್ಯೂರೋ ಶುಲ್ಕವನ್ನೂ ಹೆಚ್ಚಿಸಲಾಗಿದೆ. ಉದ್ಯೋಗಿಗಳ ಪರಿಶೀಲನಾ ಶುಲ್ಕ, ಅಪಘಾತ ಸಂಬಂಧಿತ ದಾಖಲೆಗಳು ಮತ್ತು ಇತರ ರಾಜ್ಯಗಳಿಗೆ ವಾಹನ ವರ್ಗಾವಣೆ ಪ್ರಮಾಣಪತ್ರಗಳ ಶುಲ್ಕದಲ್ಲೂ ಬದಲಾವಣೆ ಇದೆ. ಜತೆಗೆ, ಬ್ಯಾಂಕ್‌ಗಳು ಮತ್ತು ಅಂಚೆ ಇಲಾಖೆಗೆ ಪೊಲೀಸ್ ಎಸ್ಕಾರ್ಟ್ ಪಾವತಿಯ ಮೊತ್ತವನ್ನು ಪ್ರಸ್ತುತ ದರಕ್ಕಿಂತ 1.85% ಹೆಚ್ಚಿಸಲಾಗಿದೆ.