ನವದೆಹಲಿ: ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನಕ್ಕಿಂತ ಅಂಕಗಳಿಗೆ ಹೆಚ್ಚಿನ ಮಹತ್ವ ಕೊಡುವುದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಏನು ಅರಿಯದ ವಿದ್ಯಾರ್ಥಿಗಳ ಮನಸ್ಸಲ್ಲಿ ಅಂಕಗಳ ತಾರತಮ್ಯ ಮಾನಸಿಕವಾಗಿ ಕುಗ್ಗಿಸಿ ಬಿಡುತ್ತದೆ.
ಆದರೆ, ಕೆಲವರ ಜೀವನದ ಹಾದಿ ನೋಡಿದರೆ ಅಂಕಗಳಿಗಿಂತ ನಮ್ಮ ಕಲಿಕೆಯೇ ಮುಖ್ಯವಾದದ್ದು ಎಂಬುದು ಸಾಬೀತಾಗುತ್ತದೆ. ಇನ್ನೇನು ಬೋರ್ಡ್ ಪರೀಕ್ಷೆಯ ಫಲಿತಾಂಶ ಬರಲಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆತ್ಮ ಸ್ಥೈರ್ಯ ತುಂಬಲು ಐಎಎಸ್ ಅಧಿಕಾರಿಯೊಬ್ಬರು 10ನೇ ತರಗತಿಯ ಅಂಕಪಟ್ಟಿಯೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಶೇರ್ ಮಾಡಿರುವ ಅಂಕಪಟ್ಟಿ ಗುಜರಾತಿನ ಭರುಚ್ ಜಿಲ್ಲಾಧಿಕಾರಿ ತುಷಾರ್ ಡಿ ಸುಮೇರಾ ಅವರದ್ದು. 10ನೇ ತರಗತಿಯಲ್ಲಿ ತುಷಾರ್ ಅವರು ಪಡೆದಿರುವ ಅಂಕ ನೋಡಿದರೆ ನೀವು ಅಚ್ಚರಿ ಪಡುತ್ತೀರಾ. ಇಂಗ್ಲಿಷ್‌ನಲ್ಲಿ 35 ಮತ್ತು ಗಣಿತದಲ್ಲಿ ಕೇವಲ 36 ಅಂಕಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಇಂದು ಜಿಲ್ಲಾಧಿಕಾರಿಯಾಗಿದ್ದಾರೆಂದರೆ ಅದಕ್ಕೆ ಕಾರಣ ಅವರ ಅಂಕವಲ್ಲ ಅವರಲ್ಲಿರುವ ಅಗಾಧವಾದ ಜ್ಞಾನ ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು.
ತುಷಾರ್ ಅವರ ಅಂಕಪಟ್ಟಿಯನ್ನು ಛತ್ತೀಸ್ಗಢ ಕೇಡರ್ನ 2009ರ ಬ್ಯಾಚಿನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬುವರು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಭರೂಚ್ ಜಿಲ್ಲಾಧಿಕಾರಿ ತುಷಾರ್ ಸುಮೇರಾ ಅವರು ತಮ್ಮ 10 ನೇ ತರಗತಿಯ ಅಂಕಪಟ್ಟಿ ಹಂಚಿಕೊಳ್ಳುವಾಗ, ಅವರು 10 ನೇ ತರಗತಿಯಲ್ಲಿ ಮಾತ್ರ ಉತ್ತೀರ್ಣರಾಗಿದ್ದಾರೆ ಎಂದು ಬರೆದಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ 35, ಗಣಿತದಲ್ಲಿ 36 ಮತ್ತು ವಿಜ್ಞಾನದಲ್ಲಿ 38 ಅಂಕಗಳನ್ನು ಮಾತ್ರ ಪಡೆದಿದ್ದಾರೆ. ನಿನ್ನ ಕೈಯಲ್ಲಿ ಏನು ಆಗಲ್ಲ ಅಂತಾ ಇಡೀ ಹಳ್ಳಿಯಲ್ಲಿ ಮಾತ್ರವಲ್ಲ ಅವರ ಶಾಲೆಯಲ್ಲೂ ಕೂಡ ಹೇಳಿದ್ದರು. ಆದರೆ, ಅಂದು ಆ ಮಾತನ್ನು ಹೇಳಿದವರೇ ಇಂದು ತುಷಾರ್ ಅವರನ್ನು ಕೊಂಡಾಡುತ್ತಿದ್ದಾರೆ ಎಂದು ಅವನೀಶ್ ಅವರು ಬರೆದುಕೊಂಡಿದ್ದಾರೆ.
ಅವನೀಶ್ ಅವರ ಪೋಸ್ಟ್ಗೆ ತುಷಾರ್ ಅವರು ಕೂಡ ಧನ್ಯವಾದಗಳನ್ನು ತಿಳಿಸಿದ್ದಾರೆ. ಅಂದಹಾಗೆ ತುಷಾರ್ ಸುಮೇರಾ ಅವರು 2012 ರಲ್ಲಿ ಐಎಎಸ್ ಅಧಿಕಾರಿಯಾದರು. ಅವರು ಆರ್ಟ್ಸ್ ಸ್ಟ್ರೀಮ್‌ನಲ್ಲಿ ಪದವಿ ಪೂರ್ಣಗೊಳಿಸಿದರು ಮತ್ತು ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೊದಲು ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. (ಏಜೆನ್ಸೀಸ್)