ಕಾನ್ಪುರ: ಕಾನ್ಪುರ ಹಿಂಸಾಚಾರ ಪ್ರಕರಣ ಸಂಬಂಧ ಮತ್ತೆ 9 ಆರೋಪಿಗಳನ್ನು ಬಂಧಿಸಲಾಗಿದ್ದು, ಇದರೊಂದಿಗೆ ಬಂಧಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಶಂಕಿತರ ಭಾವಚಿತ್ರಗಳನ್ನು ಸಂಗ್ರಹಿಸಿದ್ದು, ಈ ವ್ಯಕ್ತಿಗಳ ಫೋಟೋಗಳನ್ನು ಹೊಂದಿರುವ ಹೋರ್ಡಿಂಗ್‌ಗಳನ್ನು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರಮುಖ ಸ್ಥಳಗಳಲ್ಲಿ ಹಾಕಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಂಕಿತರ ಬಗ್ಗೆ ಮಾಹಿತಿ ನೀಡಲು, ಹೋರ್ಡಿಂಗ್‌ಗಳಲ್ಲಿ ಸ್ಟೇಷನ್ ಹೌಸ್ ಅಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಫೋನ್ ನಂಬರ್ ಗಳನ್ನು ಹಾಕಲಾಗುವುದು. ಜನ ಶಂಕಿತರ ಬಗ್ಗೆ ಪೊಲೀಸರಿಗೆ ಮಾಹಿತಿ ರವಾನಿಸಬಹುದು ಮತ್ತು ಅವರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.
"ನಾವು ಸುಮಾರು 100 ಕಲ್ಲು ತೂರಾಟಗಾರರು ಮತ್ತು ಗಲಭೆಕೋರರನ್ನು ಸಿಸಿಟಿವಿ ದೃಶ್ಯಗಳು ಹಾಗೂ ವೀಡಿಯೊ ತುಣುಕುಗಳನ್ನು ಆಧರಿಸಿ ಗುರುತಿಸಿದ್ದೇವೆ" ಎಂದು ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಆಯುಕ್ತ ಆನಂದ್ ಪ್ರಕಾಶ್ ತಿವಾರಿ ಅವರು ಹೇಳಿದ್ದಾರೆ.
ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಅವಮಾನಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕಾನ್ಪುರದಲ್ಲಿ ಪ್ರತಿಭಟನೆ ನಡೆದಿತ್ತು. ಪ್ರತಿಭಟನೆಯ ಭಾಗವಾಗಿ ಮಾರುಕಟ್ಟೆಗಳನ್ನು ಬಂದ್ ಮಾಡುವ ವಿಚಾರದಲ್ಲಿ ಶುಕ್ರವಾರ ಪ್ರಾರ್ಥನೆಯ ಬಳಿಕ ಕಾನ್ಪುರದ ಕೆಲವು ಭಾಗಗಳಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿತ್ತು. ಈ ವೇಳೆ ಪರಸ್ಪರ ಕಲ್ಲು ತೂರಾಟ ಸಹ ನಡೆದಿತ್ತು. ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿಗೆ ಗಾಯಳಾಗಿದ್ದವು.