ತಿರುವನಂತಪುರಂ: ಲಕ್ಷದ್ವೀಪ ಮೂಲದ ಚಿತ್ರ ನಿರ್ಮಾಪಕಿ ಆಯಿಶಾ ಸುಲ್ತಾನ ವಿರುದ್ಧ ಲಕ್ಷದ್ವೀಪ ಪೊಲೀಸರು ದಾಖಲಿಸಿದ್ದ ದೇಶದ್ರೋಹ ಪ್ರಕರಣದಲ್ಲಿ ಮುಂದಿನ ವಿಚಾರಣೆಗೆ ಕೇರಳ ಹೈಕೋರ್ಟ್ ಬುಧವಾರ ತಡೆ ಹೇರಿದೆ. ದೇಶದ್ರೋಹದ ಅಪರಾಧ ಕುರಿತಂತೆ ಐಪಿಸಿ ಸೆಕ್ಷನ್ 124ಎ ಅನ್ನು ಕೇಂದ್ರ ಸರಕಾರ ಮರುಪರಿಶೀಲನೆಯನ್ನು ಪೂರ್ಣಗೊಳಿಸುವ ತನಕ ಎಲ್ಲಾ ದೇಶದ್ರೋಹ ಸಂಬಂಧಿ ಪ್ರಕರಣಗಳ ವಿಚಾರಣೆಯನ್ನು ತಡೆಹಿಡಿಯುವಂತೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ಬಂದಿದೆ.
ಟಿವಿ ಚರ್ಚಾ ಕಾರ್ಯಕ್ರಮವೊಂದರ ವೇಳೆ ಕೋವಿಡ್ ಹರಡುವಿಕೆಯ ಕುರಿತಂತೆ ಸುಳ್ಳು ಸುದ್ದಿ ಹರಡಿದ್ದರು ಎಂದು ಆರೋಪಿಸಿ ಲಕ್ಷದ್ವೀಪದ ಬಿಜೆಪಿ ನಾಯಕರೊಬ್ಬರು ಆಕೆಯ ವಿರುದ್ಧ ದೂರು ನೀಡಿದ್ದರು.
ಇತ್ತೀಚಿಗಿನ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಆಯಿಷಾ ಅವರು ಸಲ್ಲಿಸಿದ್ದ ಅಪೀಲನ್ನು ಪರಿಗಣಿಸಿದ ಜಸ್ಟಿಸ್ ಝಿಯಾದ್ ರಹಮಾನ್ ಎಎ ಅವರ ಪೀಠ ಆಕೆಯ ವಿರುದ್ಧದ ವಿಚಾರಣೆಗೆ ಮೂರು ತಿಂಗಳ ಕಾಲ ತಡೆ ಹೇರಿದೆ. ಈ ಹಿಂದೆ ನ್ಯಾಯಾಲಯ ಆಯಿಶಾಗೆ ಈ ಪ್ರಕರಣದಲ್ಲಿ ಜಾಮೀನು ನೀಡಿತ್ತು.
ಲಕ್ಷದ್ವೀಪದ ಆಡಳಿತವು ಕೈಗೊಂಡಿದ್ದ ಕೆಲವೊಂದು ವಿವಾದಾತ್ಮಕ ಸುಧಾರಣೆಗಳ ವಿರುದ್ಧ ಜೂನ್ 7, 2021ರಂದು ಟಿವಿ ಚರ್ಚಾ ಕಾರ್ಯಕ್ರಮದಲ್ಲಿ ಆಯಿಶಾ ಅವರು ಕೇಂದ್ರ ಸರಕಾರವನ್ನು ಟೀಕಿಸಿದ್ದರಲ್ಲದೆ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದಲ್ಲಿ ಜೈವಿಕ ಅಸ್ತ್ರವನ್ನು ಬಳಸಿದೆ ಎಂದು ಆರೋಪಿಸಿದ್ದರು. ಅವರು ಲಕ್ಷದ್ವೀಪದ ಆಡಳಿತಗಾರ ಪ್ರಫುಲ್ ಪಟೇಲ್ ಮತ್ತವರ ನೀತಿಗಳನ್ನು ಜೈವಿಕ ಅಸ್ತ್ರ ಎಂದು ಬಣ್ಣಿಸಿದ್ದರು.
ಆದರೆ ದುರುದ್ದೇಶದಿಂದ ತಮ್ಮ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗಿದೆ ಎಂದು ನಂತರ ಆಕೆ ಹೇಳಿದ್ದರು.