ಕೇಂದ್ರ ಸರ್ಕಾರವು ಹೊಸ ಕಾರ್ಮಿಕ ನೀತಿಯನ್ನು ಜಾರಿಗೊಳಿಸಲು ಮುಂದಾಗಿರುವುದಾಗಿ ವರದಿಯಾಗಿದೆ. ಜುಲೈ 1ರಿಂದಲೇ ಹೊಸ ನೀತಿ ಅನುಷ್ಠಾನಗೊಳ್ಳಲಿದ್ದು, ಕಾರ್ಮಿಕರು ಪಡೆಯುವ ವೇತನ, ಭವಿಷ್ಯ ನಿಧಿಗಾಗಿ ಕಡಿತವಾಗುವ ಹಣ ಹಾಗೂ ಕೆಲಸದ ಅವಧಿಯಲ್ಲಿ ಬಹಳಷ್ಟು ಬದಲಾವಣೆ ಆಗಲಿದೆ.
ಪ್ರಸ್ತಾಪಿತ ಹೊಸ ವೇತನ ಸಂಹಿತೆಯಲ್ಲಿ ನೌಕರರು ಕೈಗೆ ಪಡೆಯುವ ವೇತನದಲ್ಲಿ ಭಾರೀ ವ್ಯತ್ಯಾಸವಾಗುವುದಾಗಿ ವಿಶ್ಲೇಷಿಸಲಾಗಿದೆ. ಅದರೊಂದಿಗೆ ನಿತ್ಯದ ಕೆಲಸದ ಅವಧಿಯಲ್ಲಿ ಹೆಚ್ಚಳ, ಭವಿಷ್ಯ ನಿಧಿಗೆ (ಪಿ.ಎಫ್) ಜಮಾ ಆಗುವ ಮೊತ್ತದಲ್ಲಿ ಹೆಚ್ಚಳವಾಗುತ್ತದೆ.
ಕೇಂದ್ರ ಸರ್ಕಾರವು ಈಗಾಗಲೇ ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳಿಗೆ ಅನುಮೋದನೆ ಪಡೆದು, ನಿಯಮಗಳನ್ನು ರೂಪಿಸಿದೆ. ಎಲ್ಲ ರಾಜ್ಯ ಸರ್ಕಾರಗಳೂ ಸಹ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಬೇಕಿದ್ದು, ವೇತನ ಸಂಹಿತೆಯ ಅಡಿಯಲ್ಲಿ ಈವರೆಗೂ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕರಡು ನಿಯಮಗಳನ್ನು ಪ್ರಕಟಿಸಿವೆ.
ಹೊಸ ನಿಯಮಗಳ ಅನ್ವಯ ಕಂಪನಿಗಳು ನಿತ್ಯದ ಕಾರ್ಯಾಚರಣೆಯ ಅವಧಿಯನ್ನು 8-9 ಗಂಟೆಗಳಿಂದ 12 ಗಂಟೆಗಳಿಗೆ ಹೆಚ್ಚಿಸಲು ಅವಕಾಶವಿರಲಿದೆ. ನಿತ್ಯ 12 ಗಂಟೆ ಕೆಲಸ ಮಾಡುವ ಸಿಬ್ಬಂದಿಗೆ ವಾರದಲ್ಲಿ ಮೂರು ದಿನ ರಜೆ ನೀಡಬೇಕಾಗುತ್ತದೆ. ಇದರಿಂದಾಗಿ ವಾರದ ಒಟ್ಟು ಕೆಲಸದ ಅವಧಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ವಾರದಲ್ಲಿ ಕಾರ್ಯನಿರ್ವಹಿಸುವ ದಿನಗಳ ಸಂಖ್ಯೆ ನಾಲ್ಕಕ್ಕೆ ಇಳಿಕೆಯಾಗಲಿದೆ. ಹೊಸ ವೇತನ ನೀತಿಯು ವಾರದ ಒಟ್ಟು ಕಾರ್ಯಾಚರಣೆ ಅವಧಿಯನ್ನು 48 ಗಂಟೆಗಳಿಗೆ ನಿಗದಿ ಪಡಿಸಿದೆ.
ಹೊಸ ನೀತಿಯ ಪ್ರಕಾರ, ನೌಕರರ ಒಟ್ಟು ಮಾಸಿಕ ವೇತನದಲ್ಲಿ ಮೂಲವೇತನದ (ಬೇಸಿಕ್) ಪ್ರಮಾಣವು ಕನಿಷ್ಠ ಶೇಕಡ 50ರಷ್ಟಿರಬೇಕು. ಅಂದರೆ, ನೌಕರರ ಒಟ್ಟು ವೇತನದಲ್ಲಿ ವಿವಿಧ ಭತ್ಯೆಗಳ ಪ್ರಮಾಣವು ಶೇಕಡ 50ರಷ್ಟನ್ನು ಮೀರುವಂತಿಲ್ಲ. ಅದರ ಪರಿಣಾಮ, ವೇತನದಲ್ಲಿಯೇ ಆಗುವ ಕಡಿತದಿಂದ ಉಳಿತಾಯದ ಪ್ರಮಾಣವು ಹೆಚ್ಚಲಿದ್ದು, ನಿವೃತ್ತಿಯಲ್ಲಿ ಪಡೆಯುವ ಮೊತ್ತ ಹಾಗೂ ಗ್ಯಾಚ್ಯುಟಿಯ ಮೊತ್ತವೂ ಹೆಚ್ಚಲಿದೆ.
ಕೆಲಸದ ಅವಧಿ ಮತ್ತು ವೇತನ
ಪ್ರಸ್ತುತ ಕೈಗಾರಿಕಾ ಕಾಯ್ದೆ 1948ರ ಅನ್ವಯ ಕೈಗಾರಿಕೆಗಳು ಹಾಗೂ ಆ ರೀತಿಯ ಕಾರ್ಯನಿರ್ವಹಣಾ ಸ್ಥಳಗಳಲ್ಲಿ ಕೆಲಸದ ಅವಧಿಯನ್ನು ನಿಗದಿಪಡಿಸಲಾಗಿದೆ. ಕಚೇರಿ ನೌಕರರು ಹಾಗೂ ಇತರೆ ಉದ್ಯೋಗಿಗಳ ಕೆಲಸದ ಅವಧಿಯನ್ನು ಅಂಗಡಿ ಮತ್ತು ಸಂಸ್ಥೆಗಳಿಗೆ ಸಂಬಂಧಿಸಿದ ಕಾಯ್ದೆಗಳ ಅಡಿಯಲ್ಲಿ ರಾಜ್ಯ ಸರ್ಕಾರಗಳು ನಿಯಮ ರೂಪಿಸುತ್ತಿವೆ. ಹೊಸ ನೀತಿಯಲ್ಲಿ ನಿತ್ಯದ ಗರಿಷ್ಠ ಕೆಲಸ ಅವಧಿಯನ್ನು 12 ಗಂಟೆಗಳಿಗೆ ಹಾಗೂ ವಾರದ ಒಟ್ಟು ಕೆಲಸದ ಅವಧಿಯನ್ನು 48 ಗಂಟೆಗಳಿಗೆ ನಿಗದಿ ಪಡಿಸಲಾಗಿದೆ. ಇದರಿಂದಾಗಿ ಕಂಪನಿಗಳು ವಾರದಲ್ಲಿ ನಾಲ್ಕು ದಿನ ಮಾತ್ರ ಕಾರ್ಯಾಚರಿಸುವ ವ್ಯವಸ್ಥೆಯನ್ನು ರೂಪಿಸಿಕೊಳ್ಳಬಹುದಾಗಿದೆ.
ನೌಕರನ ಮೂಲವೇತನವು ಒಟ್ಟು ವೇತನದಲ್ಲಿ ಕನಿಷ್ಠ ಶೇಕಡ 50ರಷ್ಟು ಇರಬೇಕಾಗುತ್ತದೆ. ಅದರಿಂದಾಗಿ ಪಿ.ಎಫ್ ಖಾತೆಗೆ ಜಮೆಯಾಗುವ ಮೊತ್ತ ಹಾಗೂ ಗ್ರ್ಯಾಚುಟಿ ಪಾಲಿನಲ್ಲಿ ಹೆಚ್ಚಳವಾಗುತ್ತದೆ. ಅದರ ಪರಿಣಾಮದಿಂದ ದೀರ್ಘಾವಧಿಯ ಉಳಿತಾಯದಲ್ಲಿ ಹೆಚ್ಚಳವಾಗಿ, ಕೈಗೆ ಸಿಗುವ ಮಾಸಿಕ ವೇತನ ಮೊತ್ತ ಕಡಿಮೆಯಾಗುತ್ತದೆ.
ರಜೆಯಲ್ಲಿ ಬದಲಿಲ್ಲ....
ಒಟ್ಟು ರಜೆಯ ದಿನಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದರೆ, 45 ದಿನಗಳಿಗೆ ಒಂದು ರಜೆಯು ಸೇರ್ಪಡೆಯಾಗುವ ಬದಲು ಪ್ರತಿ 20 ಕೆಲಸದ ದಿನಗಳಿಗೆ ಒಂದು ರಜೆ ಗಳಿಕೆಯಾಗಲಿದೆ. ಹೊಸದಾಗಿ ಉದ್ಯೋಗಕ್ಕೆ ಸೇರಿದವರು 180 ದಿನಗಳಲ್ಲಿ ರಜೆ ದಿನಗಳು ಅವರ ರಜೆ ಖಾತೆಗೆ ಸೇರಲಿವೆ. ಪ್ರಸ್ತುತ 240 ದಿನಗಳ ಬಳಿಕ ನೌಕರನಿಗೆ ರಜೆ ದಿನಗಳು ಸೇರ್ಪಡೆಯಾಗುತ್ತಿವೆ.
ಕೇಂದ್ರ ಸರ್ಕಾರ ರೂಪಿಸಿರುವ 4 ಕಾರ್ಮಿಕ ಸಂಹಿತೆಗಳು:
* ವೇತನ ಸಂಹಿತೆ
* ಸಾಮಾಜಿಕ ಭದ್ರತಾ ಸಂಹಿತೆ
* ಕೆಲಸದ ಸ್ಥಳದಲ್ಲಿ ಸುರಕ್ಷತೆ, ಆರೋಗ್ಯ ಮತ್ತು ಸ್ಥಿತಿಗತಿ ಸಂಹಿತೆ
* ಕೈಗಾರಿಕಾ ಸಂಬಂಧಗಳ ಸಂಹಿತೆ