ನವದೆಹಲಿ: 5ಜಿ ತರಂಗಾಂತರ ಹರಾಜು ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಬುಧವಾರ ಸಮ್ಮತಿ ಸೂಚಿಸಿದೆ.
ಒಟ್ಟು 72 ಗಿಗಾಹರ್ಟ್ಸ್ ತರಂಗಾಂತರವು 20 ವರ್ಷಗಳ ಅವಧಿಗೆ ಹರಾಜು ಹಾಕಲಾಗುತ್ತಿದ್ದು, ಜುಲೈ ಅಂತ್ಯದ ವೇಳೆಗೆ ಹರಾಜು ಪ್ರಕ್ರಿಯೆ ನಡೆಯಲಿದೆ.
'ಡಿಜಿಟಲ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ, ಮೇಕ್ ಇನ್ ಇಂಡಿಯಾ ಸೇರಿದಂತೆ ಸರ್ಕಾರ ಕಾರ್ಯಕ್ರಮಗಳಲ್ಲಿ ಡಿಜಿಟಲ್ ಸಂಪರ್ಕವು ಪ್ರಮುಖ ಭಾಗವಾಗಿದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
'ತರಂಗಾಂತರದ ಹರಾಜು ಪ್ರಕ್ರಿಯೆಯು ಕಡಿಮೆ (600 ಮೆಗಾಹರ್ಟ್ಸ್‌ನಿಂದ 2300 ಮೆಗಾಹರ್ಟ್ಸ್), ಮಧ್ಯಮ (3300 ಮೆಗಾಹರ್ಟ್ಸ್) ಹಾಗೂ ಅಧಿಕ (26 ಗಿಗಾಹರ್ಟ್ಸ್) ಆವರ್ತನ ಶ್ರೇಣಿಗಳನ್ನು ಒಳಗೊಂಡಿರಲಿದೆ. ಪ್ರಸ್ತುತ ಬಳಕೆಯಲ್ಲಿ 4ಜಿ ಸೇವೆಗಳಿಗಿಂತ ಹತ್ತು ಪಟ್ಟು ಹೆಚ್ಚು ವೇಗ ಮತ್ತು ಡೌನ್‌ಲೋಡ್ ಸಾಮರ್ಥ್ಯವನ್ನು ಒಳಗೊಂಡಿರುವ 5ಜಿ ಸೇವೆಗಳನ್ನು ಪೂರೈಸಲು ದೂರ ಸಂಪರ್ಕ ಸೇವಾದಾರ ಸಂಸ್ಥೆಗಳು ಮಧ್ಯಮ ಮತ್ತು ಅಧಿಕ ಮಟ್ಟದ ಆವರ್ತನ ಶ್ರೇಣಿಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ' ಎಂದು ಪ್ರಸ್ತಾಪಿಸಲಾಗಿದೆ.
'2015ರಿಂದ ದೇಶದಾದ್ಯಂತ ಮೊಬೈಲ್ ಇಂಟರ್‌ನೆಟ್ 4ಜಿ ಸೇವೆಗಳು ಕ್ಷಿಪ್ರವಾಗಿ ವಿಸ್ತರಿಸುತ್ತಿದ್ದು, ಜನರ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದೆ. ಪ್ರಸ್ತುತ ದೇಶದಲ್ಲಿ 80 ಕೋಟಿ ಜನರು ಬ್ರಾಡ್‌ಬ್ಯಾಂಡ್ (ಮೊಬೈಲ್ ಇಂಟರ್‌ನೆಟ್) ಸೇವೆ ಬಳಸುತ್ತಿದ್ದು, 2014ರಲ್ಲಿ ಬಳಕೆದಾರರ ಸಂಖ್ಯೆ 10 ಕೋಟಿ ಇತ್ತು' ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿ 6ಜಿ ಸೇವೆಗಳನ್ನು ಆರಂಭಿಸುವ ಯೋಜನೆ ಇರುವುದಾಗಿ ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು.