ನವದೆಹಲಿ: ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ವಿಪಕ್ಷಗಳು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವಾಗಲೇ ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆ ರೈಲ್ವೆ ಕಳೆದ 4 ವರ್ಷಗಳಲ್ಲಿ 92, 000 ಕ್ಕೂ ಹೆಚ್ಚು ಉದ್ಯೋಗಗಳನ್ನು ರದ್ದುಗೊಳಿಸಿದೆ.
2018-19, 2021-22 ನೇ ಸಾಲಿನಲ್ಲಿ ವಿವಿಧ ಶ್ರೇಣಿ, ವಿಭಾಗಗಳಲ್ಲಿ ರೈಲ್ವೆ ಇಲಾಖೆ 92,000 ಹುದ್ದೆಗಳನ್ನು ರದ್ದುಗೊಳಿಸಿದ್ದರೂ ರೈಲ್ವೆಯಲ್ಲಿ ಇನ್ನೂ 2.98 ಲಕ್ಷ ಖಾಲಿ ಹುದ್ದೆಗಳಿವೆ ಎಂಬುದು ಗಮನಾರ್ಹ ಸಂಗತಿ. ಕೆಲಸದ ಹೊರೆಯ ಆಧಾರದಲ್ಲಿ ಕೆಲವು ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಸಮರ್ಥನೆ ನೀಡಿದ್ದು, 2019-20 ನೇ ಆರ್ಥಿಕ ವರ್ಷದಲ್ಲಿ ಎಲ್ಲಾ 17 ಝೋನ್ ಗಳಲ್ಲಿಯೂ ಅತಿ ಹೆಚ್ಚು ಅಂದರೆ 31,275 ಹುದ್ದೆಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದೆ.
ಈ ಆರ್ಥಿಕ ವರ್ಷಗಳಲ್ಲಿ ಬೇರೆ ವಿಭಾಗಗಳಿಗೆ ಹೋಲಿಕೆ ಮಾಡಿದರೆ, ಇಜಾತ್ ನಗರ್ ವಿಭಾಗ 1,430 ಹುದ್ದೆಗಳನ್ನು ರದ್ದುಗೊಳಿಸಿದ್ದರೆ, ಎರಡನೇ ಸ್ಥಾನದಲ್ಲಿ ವಾರಣಾಸಿ ವಿಭಾಗ, ನಂತರದಲ್ಲಿ 1,151 ಹುದ್ದೆಗಳನ್ನು ರದ್ದುಗೊಳಿಸಿರುವ ಲಖನೌ ವಿಭಾಗವಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕಳೆದ ಸಂಸತ್ ಅಧಿವೇಶನದಲ್ಲಿ ರೈಲ್ವೆ ಇಲಾಖೆ 92,000 ಹುದ್ದೆಗಳನ್ನು ರದ್ದುಗೊಳಿಸಿದ್ದನ್ನು ಒಪ್ಪಿಕೊಂಡಿದ್ದರು. 2018-19 ರಲ್ಲಿ ಈಶಾನ್ಯ ವಲಯದಿಂದ 3,296 ಹುದ್ದೆಗಳು, ಉತ್ತರ ರೈಲ್ವೆಯಲ್ಲಿ 3,221, ಪೂರ್ವ ಕೇಂದ್ರದಲ್ಲಿ 1,735 ಹುದ್ದೆಗಳು, 1,514 ಹುದ್ದೆಗಳು ಪಶ್ಚಿಮ ರೈಲ್ವೆಯಲ್ಲಿ ರದ್ದುಗೊಂಡಿದ್ದವು.