ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಅಕ್ರಮ ಹಣ ವರ್ಗಾವಣೆಗೆ ಸಂಬಂದಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಮತ್ತೆ ಸಮನ್ಸ್ ಜಾರಿ ಮಾಡಲಾಗಿದೆ.
ಸೋಮವಾರ, ನಾಲ್ಕನೇ ದಿನದ ವಿಚಾರಣೆ ನಂತರವೂ ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯ (ಇಡಿ) ಮತ್ತೆ ಸಮನ್ಸ್ ನೀಡಿದ್ದು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಅವರನ್ನು ಮತ್ತೆ ವಿಚಾರಣೆಗಾಗಿ ಹಾಜರಾಗಲು ತಿಳಿಸಿದೆ. ರಾಹುಲ್ ಗಾಂಧಿ ಅವರನ್ನು 4 ದಿನಗಳಲ್ಲಿ ಸುಮಾರು 40 ಗಂಟೆಗೂ ಹೆಚ್ಚು ಕಾಲ ವಿಚಾರಣೆ ಮಾಡಲಾಗಿದ್ದು, ಇಷ್ಟಾದರೂ ಮತ್ತೆ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ವಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸತತ ಮೂರು ದಿನಗಳ ವಿಚಾರಣೆಯ ನಂತರ, ಇಡಿ ಸೋಮವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮತ್ತೆ ವಿಚಾರಣೆ ನಡೆಸಿತ್ತು. ಬಳಿಕ ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ವಿಚಾರಣೆ ಹಿನ್ನಲೆಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯ ಕಚೇರಿಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಿದೆ. ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಇಡಿ ಕಚೇರಿಯಿಂದ ಊಟಕ್ಕೆ ತೆರಳಿದ ರಾಹುಲ್ ಗಾಂಧಿ, ಸುಮಾರು ಒಂದು ಗಂಟೆಯ ನಂತರ ಮತ್ತೆ ಇಡಿ ವಿಚಾರಣೆಗೆ ಭಾಗಿಯಾದರು.
ದೆಹಲಿ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯದ (ಇಡಿ) ಪ್ರಧಾನ ಕಚೇರಿಯನ್ನು ಸೋಮವಾರ ಬೆಳಗ್ಗೆ 11:05 ರ ಸುಮಾರಿಗೆ ರಾಹುಲ್ ಗಾಂಧಿ ಅವರು ಸಿಆರ್‌ಪಿಎಫ್ ಸಿಬ್ಬಂದಿಯ "ಝಡ್ ಪ್ಲಸ್" ವರ್ಗದ ಭದ್ರತೆಯೊಂದಿಗೆ ತಲುಪಿದ್ದರು. ಒಂದು ದಿನದ ಹಿಂದೆಯಷ್ಟೇ ರಾಹುಲ್ ಗಾಂಧಿಯವರ 52ನೇ ವರ್ಷದ ಹುಟ್ಟುಹಬ್ಬವಿತ್ತು. ಈ ನಡುವೆ ಸೋನಿಯಾ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕಳೆದ ವಾರ ಸೋಮವಾರ, ಮಂಗಳವಾರ ಮತ್ತು ಬುಧವಾರ ಸತತ ಮೂರು ದಿನಗಳ ಕಾಲ ಇಡಿ ಅಧಿಕಾರಿಗಳು ರಾಹುಲ್ ಗಾಂಧಿಯನ್ನು 30 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ಅವರ ಹೇಳಿಕೆಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿದೆ.