ಗುವಾಹಟಿ: ರಾಷ್ಟ್ರದ ಈಶಾನ್ಯ ಭಾಗದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಅಸ್ಸಾಂ ಮತ್ತು ಮೇಘಾಲಯದಲ್ಲಿ ನೆರೆಯಿಂದಾಗಿ ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 42ಕ್ಕೇರಿದೆ. ಪ್ರವಾಹದಿಂದ ಸುಮಾರು 40 ಲಕ್ಷ ಜನರು ಬಾಧಿತರಾಗಿದ್ದಾರೆ.
ಈಶಾನ್ಯ ರಾಜ್ಯದ 33 ಜಿಲ್ಲೆಗಳ ಪೈಕಿ 32 ಜಿಲ್ಲೆಗಳು ಪ್ರವಾಹದಿಂದ ಮುಳುಗಿವೆ.ಅಸ್ಸಾಂನಲ್ಲಿ ಕಳೆದ 24 ಗಂಟೆಗಳಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 31 ಲಕ್ಷ ಜನರು ನೆರೆಯಿಂದ ಬಾಧಿತರಾಗಿದ್ದಾರೆ, ಅದರಲ್ಲಿ 1.5 ಲಕ್ಷ ಜನರು 514 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. 4,000 ಕ್ಕೂ ಹೆಚ್ಚು ಹಳ್ಳಿಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಹ್ಮಪುತ್ರ, ಸುಬನ್ಸಿರಿ ಮತ್ತು ಮಾನಸ್ ಸೇರಿದಂತೆ ಐದು ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
'ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ನಾವು ಜನರಿಗೆ ಸಹಾಯ ಮಾಡಲು ಶ್ರಮಿಸುತ್ತಿದ್ದೇವೆ. ಜನರನ್ನು ತಲುಪಲು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗುತ್ತಿದೆ' ಎಂದು ಅಸ್ಸಾಂನ ಜಲಸಂಪನ್ಮೂಲ ಸಚಿವ ಪಿಜುಶ್ ಹಜಾರಿಕಾ ಹೇಳಿದ್ದಾರೆ. ಶನಿವಾರ, ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಮಾತನಾಡಿದ್ದು ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಭರವಸೆ ನೀಡಿದ್ದಾರೆ.
ಈ ವಾರ ಅಸ್ಸಾಂನಲ್ಲಿ ಭೂಕುಸಿತ ಮತ್ತು ಹಠಾತ್ ಪ್ರವಾಹದಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಅಧಿಕೃತ ವರದಿಗಳ ಪ್ರಕಾರ ಏಪ್ರಿಲ್‌ನಿಂದ ಒಟ್ಟು 62 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ನೆರೆಯ ಮೇಘಾಲಯದಲ್ಲಿ ನೆರೆ ಕನಿಷ್ಠ ಐದು ಲಕ್ಷ ಜನರ ಜೀವನದ ಮೇಲೆ ಪರಿಣಾಮ ಬೀರಿದೆ. ಭೂಕುಸಿತದಿಂದ ಭಾರೀ ಹಾನಿಯಾಗಿದ್ದು ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಕಡಿತಗೊಂಡಿವೆ.
ಮೇಘಾಲಯದ ಚಿರಾಪುಂಜಿಯ ಸೊಹ್ರಾ ಪ್ರದೇಶವು ಶುಕ್ರವಾರ ಮೂರನೇ ಬಾರಿ ಅತಿ ಹೆಚ್ಚು ಮಳೆಯನ್ನು ದಾಖಲಿಸಿದೆ. ಈ ವಾರವೊಂದರಲ್ಲೇ ರಾಜ್ಯದಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಘೋಷಿಸಿದ್ದಾರೆ.
ಶುಕ್ರವಾರದಿಂದ ನಿರಂತರ ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ತ್ರಿಪುರಾದಲ್ಲಿ 10,000 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ . ಭೂಕುಸಿತದಿಂದಾಗಿ ರಾಜ್ಯಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಬಾಂಗ್ಲಾದೇಶದ ಮೂಲಕ ಅಗತ್ಯ ಸಾಮಗ್ರಿಗಳನ್ನು ಕಳುಹಿಸಲು ತ್ರಿಪುರಾ ಸರ್ಕಾರವು ಕೇಂದ್ರವನ್ನು ಒತ್ತಾಯಿಸಿದೆ. ಸಿಕ್ಕಿಂನಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.