ನವದೆಹಲಿ: ಕೋಟ್ಯಂತರ ರೂಪಾಯಿ ಸಂಭಾವನೆ ಪಡೆದು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸೆಲೆಬ್ರಿಟಿಗಳು, ಕ್ರೀಡಾಪಟುಗಳಿಗೆ ಈಗ ಸರ್ಕಾರ ನಿಯಮ ವಿಧಿಸಿದೆ. ಸೆಲೆಬ್ರಿಟಿಗಳು ಜಾಹೀರಾತಿನಲ್ಲಿ ಪ್ರಾಮಾಣಿಕ ಅಭಿಪ್ರಾಯ, ನಂಬಿಕೆ, ಅನುಭವ ನೀಡಬೇಕು.
ಈ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡಿದರೆ ಮೊದಲ ಬಾರಿಗೆ 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ನಂತರ ಪ್ರತಿ ಉಲ್ಲಂಘನೆಗೆ ತಲಾ 50 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಜೂ.10ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ನಿಯಮ ಜಾರಿಗೆ ತಂದಿದೆ. ಮುದ್ರಣ, ದೂರದರ್ಶನ ಮತ್ತು ಆನ್ಲೈನ್ನಂತಹ ಎಲ್ಲ ವೇದಿಕೆಗಳಲ್ಲಿ ಪ್ರಕಟವಾಗುವ ಎಲ್ಲ ಜಾಹೀರಾತುಗಳಿಗೆ ಈ ಮಾರ್ಗಸೂಚಿ ಅನ್ವಯವಾಗುತ್ತದೆ.
ಯಾಕೆ ಈ ನಿಯಮ?: ಸುಗಂಧ ದ್ರವ್ಯ ಒಂದರ ವಿವಾದಾತ್ಮಕ ಜಾಹೀರಾತನ್ನು ತೆಗೆದುಕಾಕುವಂತೆ ಸಾಮಾಜಿಕ ಜಾಲತಾಣಗಳಿಗೆ ಆದೇಶಿಸಿದ ಬೆನ್ನಲ್ಲೇ ಸರ್ಕಾರ, ಜಾಹೀರಾತುಗಳಿಗೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಮಕ್ಕಳನ್ನು ಗುರಿಯಾಗಿಸುವ ಮತ್ತು ಗ್ರಾಹಕರನ್ನು ಓಲೈಸಲು ಉಚಿತ ಕ್ಲೈಮ್ಳನ್ನು ಮಾಡುವುದು, ಬೆಟ್ ಜಾಹೀರಾತು (ಬೆಟ್ ಜಾಹೀರಾತು ಎಂದರೆ ಗ್ರಾಹಕರನ್ನು ಆಕರ್ಷಿಸಲು ಕಡಿಮೆ ಬೆಲೆಗೆ ಸರಕುಗಳು, ಉತ್ಪನ್ನಗಳು ಅಥವಾ ಸೇವೆಗಳನ್ನು ಮಾರಾಟ ಮಾಡುವ ಜಾಹೀರಾತು ಎಂದರ್ಥ) ಸೇರಿದಂತೆ ದಾರಿತಪ್ಪಿಸುವ ಜಾಹೀರಾತುಗಳನ್ನು ತಡೆಗಟ್ಟುವುದು ಈ ಹೊಸ ಮಾರ್ಗಸೂಚಿಯ ಉದ್ದೇವಾಗಿದೆ ಎಂದು ಸಚಿವಾಲಯ ಹೇಳಿದೆ. ಯಾವುದೇ ಅನುಮೋದನೆಯು ಉತ್ಪನ್ನ ಪ್ರತಿಪಾದನೆ ಮಾಡುವ ವ್ಯಕ್ತಿ ಅಥವಾ ಸಂಸ್ಥೆಗಳ ನಿಜವಾದ ಸಮಂಜಸವಾದ ಅಭಿಪ್ರಾಯವನ್ನು ಬಿಂಬಿಸಬೇಕು. ಜಾಹೀರಾತಿನಲ್ಲಿ ತೋರಿಸಲಾದ ಸರಕುಗಳು, ಉತ್ಪನ್ನ ಅಥವಾ ಸೇವೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಹೊಂದಿರಬೇಕು.