ನವದೆಹಲಿ:ದೇಶದಲ್ಲಿ ವಾಯುಮಾಲಿನ್ಯದ ಸ್ಥಿತಿಗತಿಯ ಕುರಿತ ವರದಿ ನೀಡುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿ ನೋಟಿಸ್ ಜಾರಿಗೊಳಿಸಿದೆ.
ನವದೆಹಲಿ:ದೇಶದಲ್ಲಿ ವಾಯುಮಾಲಿನ್ಯದ ಸ್ಥಿತಿಗತಿಯ ಕುರಿತ ವರದಿ ನೀಡುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೂಚಿಸಿ ನೋಟಿಸ್ ಜಾರಿಗೊಳಿಸಿದೆ.
ದೇಶದಲ್ಲಿ ವಾಯುಮಾಲಿನ್ಯ "ಮಾನವನ ಆರೋಗ್ಯಕ್ಕೆ ಅತ್ಯಂತ ದೊಡ್ಡ ಅಪಾಯ" ಎಂದು ವರದಿಯೊಂದನ್ನು ಉಲ್ಲೇಖಿಸಿ ಮಾಧ್ಯಮವೊಂದು ಜೂನ್ 14 ರಂದು ಪ್ರಕಟಿಸಿದ ಲೇಖನವನ್ನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡು ಆಯೋಗ ಮೇಲಿನ ನೋಟಿಸ್ ಜಾರಿಗೊಳಿಸಿದೆ.
ದೇಶದಲ್ಲಿ ವಾಯುಮಾಲಿನ್ಯದಿಂದ ಜನರು ತಮ್ಮ ಜೀವಿತಾವಧಿಯ ಐದು ವರ್ಷ ಕಳೆದುಕೊಳ್ಳುತ್ತಾರೆ ಎಂದು ಏರ್ ಕ್ವಾಲಿಟಿ ಲೈಫ್ ಇಂಡೆಕ್ಸ್ ಎಂಬ ವರದಿ ಹೇಳಿದೆ.
ಇದು ನಿಜವಾಗಿದ್ದರೆ `ಜೀವಿಸುವ ಹಕ್ಕಿನ' ಗಂಭೀರ ವಿಚಾರ ಇದಾಗಿರುತ್ತದೆ ಎಂದು ಹೇಳಿದ ಆಯೋಗವು 2019ರಲ್ಲಿ ಸಚಿವಾಲಯವು ಜಾರಿಗೊಳಿಸಿದ ರಾಷ್ಟ್ರೀಯ ಶುದ್ಧ ಗಾಳಿ ಕಾರ್ಯಕ್ರಮದ ಸ್ಥಿತಿಗತಿಯ ಕುರಿತು ಕೂಡ ನಾಲ್ಕು ವಾರಗಳಲ್ಲಿ ವರದಿ ನೀಡಬೇಕು ಎಂದು ಹೇಳಿದೆ.
ಈ ವರ್ಷದ ಎಕ್ಯುಎಲ್‍ಐ ವರದಿಯ ಪ್ರಕಾರ ಭಾರತವು ಜಗತ್ತಿನಲ್ಲಿ ಗರಿಷ್ಠ ವಾಯುಮಾಲಿನ್ಯ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ ಹಾಗೂ 2013ರಿಂದೀಚೆಗೆ ಭಾರತವು ಜಗತ್ತಿನ ಮಾಲಿನ್ಯಕ್ಕೆ ಶೇ 44 ಕೊಡುಗೆ ನೀಡಿದೆ ಎಂದು ಹೇಳಿದೆ.
ವಾಯುಮಾಲಿನ್ಯವು ಭಾರತೀಯನೊಬ್ಬನ ಸರಾಸರಿ ಜೀವಿತಾವಧಿಯನ್ನು ಐದು ವರ್ಷ ಕಡಿಮೆಗೊಳಿಸುತ್ತದೆ. ಈಗಿನ ವಾಯುಮಾಲಿನ್ಯ ಮಟ್ಟ ಮುಂದುವರಿದರೆ ಉತ್ತರ ಭಾರತದ ಸುಮಾರು 51 ಕೋಟಿ ಜನರು, ಅಂದರೆ ಭಾರತದ ಶೇ 40 ರಷ್ಟು ಜನಸಂಖ್ಯೆ ತಮ್ಮ ಜೀವಿತಾವಧಿಯ ಏಳೂವರೆ ವರ್ಷ ಕಳೆದುಕೊಳ್ಳಬಹುದು ಎಂದು ವರದಿ ಹೇಳಿದೆ.