ಕಾಸರಗೋಡು: ಜಿಲ್ಲೆಯ ವಿವಿಧ ಆರೋಗ್ಯ ಸೌಲಭ್ಯಗಳ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ `7.8 ಕೋಟಿ ಮಂಜೂರು ಮಾಡಿದ್ದು, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಲ್ಲಿ ಸೇರಿಸಿದೆ. ಜಿಲ್ಲಾ ಆಸ್ಪತ್ರೆ, ಪೂಡಂಕಲ್ ತಾಲೂಕು ಆಸ್ಪತ್ರೆ, ಬೇಡಡ್ಕ ತಾಲೂಕು ಆಸ್ಪತ್ರೆ, ಎಫ್‍ಎಚ್‍ಸಿ ಪಾಣತ್ತೂರು, ಪಿಎಚ್‍ಸಿ ಮಾವಿಲ ಕಡಪ್ಪುರಂ ಮತ್ತು ಪಿಎಚ್‍ಸಿ ವೆಳ್ಳರಿಕುಂಡುಗಳಲ್ಲಿ ಆರು ಹೊಸ ಆರೋಗ್ಯ ಸೌಲಭ್ಯಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಐಪಿ ಬ್ಲಾಕ್ ನಿರ್ಮಾಣಕ್ಕೆ `2.50 ಕೋಟಿ ಮೀಸಲಿಡಲಾಗಿದೆ. ಐಪಿ ಬ್ಲಾಕ್ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ `57 ಲಕ್ಷ ಮಂಜೂರಾಗಿದೆ. ಉಳಿದ `193 ಲಕ್ಷವನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ ಮಂಜೂರು ಮಾಡಲಾಗುವುದು.
ಐದು ಅಂತಸ್ತಿನ ಐಪಿ ಬ್ಲಾಕ್‍ನಲ್ಲಿ ಜನರಲ್ ಒಪಿ, ಇಸಿಜಿ ರೂಮ್, ಮೆಡಿಸಿನ್ ಒಪಿ, ಚೆಸ್ಟ್ ಒಪಿ, ಅಬ್ಸರ್ವೇಶನ್ ರೂಮ್, ವೇಟಿಂಗ್ ಏರಿಯಾ, ಸರ್ಜರಿ ರೂಮ್, ಲ್ಯಾಬೋರೇಟರಿ ಮತ್ತು ರೆಸ್ಟ್ ರೂಮ್, ನೇತ್ರಶಾಸ್ತ್ರದ ಒಪಿ ಮತ್ತು ಡೆಂಟಲ್ ಒಪಿ ಸೇರಿವೆ.
ಕಳ್ಳಾರ್ ಪಂಚಾಯಿತಿ ವ್ಯಾಪ್ತಿಯ ಪೂಡಂಕಲ್ ತಾಲೂಕು ಆಸ್ಪತ್ರೆಯ ಮೂಲಸೌಕರ್ಯ ಅಭಿವೃದ್ಧಿಗೆ 67 ಲಕ್ಷ ಮೀಸಲಿಡಲಾಗಿದೆ. ಯೋಜನೆಯು ಫಿಸಿಯೋಥೆರಪಿ ಘಟಕ ಮತ್ತು ದಂತ ಘಟಕದ ಸೌಲಭ್ಯಗಳ ಸುಧಾರಣೆ, ವೈದ್ಯಕೀಯ ದಾಖಲೆ ಕೊಠಡಿ ನಿರ್ಮಾಣ ಮತ್ತು ಎಂಡೋಸಲ್ಫಾನ್ ಕಟ್ಟಡಕ್ಕಾಗಿ ಎಲಿವೇಟರ್ ನಿರ್ಮಾಣವನ್ನು ಒಳಗೊಂಡಿದೆ.
ಮೂಲಸೌಕರ್ಯ ಅಭಿವೃದ್ಧಿಯ ಭಾಗವಾಗಿ ಪಾಣತ್ತೂರು ಎಫ್‍ಎಚ್‍ಸಿಯಲ್ಲಿ ಕ್ವಾರ್ಟರ್ಸ್ ಮತ್ತು ಕಾಂಪೌಂಡ್ ಗೋಡೆಗಳ ನಿರ್ಮಾಣಕ್ಕೆ `1.60 ಕೋಟಿ ಮೀಸಲಿಡಲಾಗಿದೆ. ಯೋಜನೆಯ ಕ್ವಾರ್ಟರ್ಸ್ ನಿರ್ಮಾಣವು ಎರಡು ಮಲಗುವ ಕೋಣೆಗಳು, ಊಟದ ಕೋಣೆ, ಅಡಿಗೆ ಮತ್ತು ಸ್ನಾನಗೃಹವನ್ನು ಒಳಗೊಂಡಿದೆ.
ಮಾವಿಲಕಡಪ್ಪುರಂ ಪಿಎಚ್‍ಸಿಯಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ `87 ಲಕ್ಷ ಮೀಸಲಿಡಲಾಗಿದೆ. ಎಲ್‍ಎಸ್‍ಜಿಡಿ ಕಾರ್ಯನಿರ್ವಾಹಕ ಅಧಿಕಾರಿಯ ಯೋಜನೆಯು ಕಾಯುವ ಪ್ರದೇಶ, ಎರಡು ಒಪಿ ಕೊಠಡಿಗಳು, ಪ್ರಯೋಗಾಲಯ ಕೊಠಡಿ, ಸ್ಟೋರ್ ರೂಂ, ವಿಶ್ರಾಂತಿ ಕೊಠಡಿ, ವೈದ್ಯಕೀಯ ಅಧಿಕಾರಿಯ ಕೊಠಡಿ, ಇಮ್ಯುನೈಸೇಶನ್ ಕೊಠಡಿ ಮತ್ತು ಜೆಎಚ್‍ಐ ಕೊಠಡಿಯನ್ನು ಒಳಗೊಂಡಿದೆ.
ವೆಳ್ಳರಿಕ್ಕುಂಡು ಪಿಎಚ್‍ಸಿ ಮೂಲಸೌಕರ್ಯ ಅಭಿವೃದ್ಧಿಗೆ `57.10 ಲಕ್ಷ ಮೀಸಲಿಡಲಾಗಿದೆ. ಯೋಜನೆಯು ಸಮ್ಮೇಳನ ಸಭಾಂಗಣ ಮತ್ತು ಶೌಚಾಲಯ ಬ್ಲಾಕ್ ಅನ್ನು ಒಳಗೊಂಡಿದೆ.
ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ `1.44 ಲಕ್ಷ ಮೀಸಲಿಡಲಾಗಿದೆ. ಎಲ್‍ಎಸ್‍ಜಿಡಿ ವಿಭಾಗದದ ಇಂಜಿನಿಯರ್ ಕಾರ್ಯನಿರ್ವಾಹಕ ಅಧಿಕಾರಿ ಈ ಯೋಜನೆ ನೇತೃತ್ವ ವಹಿಸುವರು. ನಿರ್ಮಾಣ ಕಾರ್ಯ, ವಿದ್ಯುದ್ದೀಕರಣ ಕಾರ್ಯ ಮತ್ತು ಆಸ್ಪತ್ರೆಗೆ ಉಪಕರಣಗಳ ಖರೀದಿಯನ್ನು ಒಳಗೊಂಡಿದೆ.
ಹಲವು ವರ್ಷಗಳಷ್ಟು ಹಳೆಯದಾದ ಈಗಿರುವ ಆರೋಗ್ಯ ಸೌಲಭ್ಯಗಳ ಕಟ್ಟಡದಲ್ಲಿ ಸಮರ್ಪಕ ಸೌಲಭ್ಯಗಳಿಲ್ಲದ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜಮೋಹನ್ ಮಾತನಾಡಿ, ಕಾಮಗಾರಿಗೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದಿರುವರು.