ರಕ್ಷಿತ್ ಶೆಟ್ಟಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ 777 ಚಾರ್ಲಿ ಸಾಕಷ್ಟು ಪ್ರೀ-ರಿಲೀಸ್ ಹೈಪ್ ಸೃಷ್ಟಿಸಿದೆ. ಭಾರತದಾದ್ಯಂತ 100 ಕ್ಕೂ ಹೆಚ್ಚು ಪ್ರೀಮಿಯರ್ ಶೋ ನಡೆಸಿದೆ.
ವಿಶ್ವಾದ್ಯಂತ ಸರಿಸುಮಾರು 1,800 ಥಿಯೇಟರ್‍ಗಳಲ್ಲಿ ಚಿತ್ರ ಇಂದು ಬಿಡುಗಡೆಯಾಗಲಿದೆ ಎಂದು ರಕ್ಷಿತ್ ಶೆಟ್ಟಿ ಮಾಧ್ಯಮದ ಕೆಲವು ವಿಭಾಗಗಳಿಗೆ ಸಿನಿಮಾ ಗ್ರಾಂಡ್ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೆಆರ್‍ಜಿ ಸ್ಟುಡಿಯೋಸ್ ಅಡಿಯಲ್ಲಿ ಕರ್ನಾಟಕದಲ್ಲಿ ಚಿತ್ರವನ್ನು ವಿತರಿಸುತ್ತಿರುವ ಕಾರ್ತಿಕ್ ಗೌಡ, ರಾಜ್ಯದಲ್ಲಿ ಸುಮಾರು 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಹೇಳಿದರು.
500 ಕ್ಕೂ ಹೆಚ್ಚು ವಿದೇಶಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಂದು(ಜೂನ್ 10) ಚಿತ್ರ ಬಿಡುಗಡೆಯಾಗುವ ಮೊದಲು ನಾವು ಕರ್ನಾಟಕದಲ್ಲಿಯೇ 100 ಪ್ರೀಮಿಯರ್ ಶೋಗಳನ್ನು ಆಯೋಜಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ಯು.ಎಸ್.ಎ ಯಲ್ಲಿ 200 ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಮತ್ತು ಗಲ್ಫ್‍ನಲ್ಲಿ 100 ಸ್ಕ್ರೀನ್‍ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ನೇಪಾಳದಲ್ಲಿ ಪ್ರೀಮಿಯರ್ ಶೋ ನಡೆಸಲಾಗಿದೆ. ಇದರಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಪ್ರಪಂಚದಾದ್ಯಂತದ ವಿವಿಧ ವಿತರಕರೊಂದಿಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ ಮತ್ತು ಸ್ಕ್ರೀನಿಂಗ್ ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದಿದ್ದಾರೆ.
ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ಮತ್ತು ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ವಿತರಣೆ ಹಕ್ಕು ಪಡೆದಿದ್ದಾರೆ. ತೆಲುಗು ಆವೃತ್ತಿಯನ್ನು ರಾಣಾ ದಗ್ಗುಪಾಟಿ ವಿತರಿಸಲಿದ್ದು, ಚಿತ್ರವನ್ನು 100-150 ಥಿಯೇಟರ್‍ಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡಲು ನಿರ್ಮಾಣ ಸಂಸ್ಥೆ ನಿರ್ಧರಿಸಿದೆ. ಬೇಡಿಕೆಗೆ ಅನುಗುಣವಾಗಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿಸುವುದಾಗಿ ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.
777 ಚಾರ್ಲಿ ಸಿನಿಮಾಗೆ ಕಾಸರಗೋಡಿನ ಕಿರಣ್‍ರಾಜ್ ಕಥೆ ಬರೆದು ನಿರ್ದೇಶಿಸಿದ್ದಾರೆ ಹಾಗೂ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ, ರಾಜ್ ಬಿ ಶೆಟ್ಟಿ, ಸಂಗೀತಾ ಶೃಂಗೇರಿ, ಡ್ಯಾನಿಶ್ ಸೇಟ್ ಮತ್ತು ಬಾಬಿ ಸಿಂಹ ಮತ್ತಿತರರು ಅಭಿನಯಿಸಿದ್ದಾರೆ. ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ನೋಬಿನ್ ಪಾಲ್ ನೀಡಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ.