ಕಾಸರಗೋಡು: ಮಾತೃಭಾಷೆ ಮಲೆಯಾಳ. ಕಲಿತದ್ದು ಕನ್ನಡ. ಓದಿದ್ದು 12 ತರಗತಿಯಾದರೂ ಚಿತ್ರರಂಗದಲ್ಲಿ ಛಾಪು ಮೂಡಿಸಬೇಕೆಂಬ ತುಡಿತಕ್ಕೆ ಅದು ಅಡ್ಡಿಯಾಗಲೇ ಇಲ್ಲ. ಗಡಿನಾಡು ಕಾಸರಗೋಡಿನ ಮಲ್ಲಮೂಲೆ ಗ್ರಾಮದ ಅಚ್ಯುತ ಮಣಿಯಾಣಿ ಮತ್ತು ಗೋದಾವರಿ ದಂಪತಿಗಳ ಮಗನಾಗಿ ಜನಿಸಿದ್ದ ಕಿರಣ್‍ರಾಜ್‍ಗೆ ಇದೀಗ ಮೂವತ್ತರ ಆಸುಪಾಸಿನ ಹರೆಯ.
ಬಾಲ್ಯದಲ್ಲಿ ಕಂಡಿದ್ದು ಕಡು ಬಡತನ. ಉನ್ನತ ವಿದ್ಯಾಭ್ಯಾಸ ದೂರದ ಮಾತು. ದುಡಿತದ ಸಲುವಾಗಿ ಹತ್ತನೇ ತರಗತಿ ಬಳಿಗ ಮಂಗಳೂರು ಪೇಟೆ ಸೇರಿದ್ದ ಈತ ಬಾರ್‍ನಲ್ಲಿ ವೈಟರ್, ಕಟ್ಟಡ ಕಾಯುವ ವಾಚ್‍ಮೆನ್ ಕೆಲಸದ ಜತೆ ಜತೆಗೆ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟಿ ಪಾಸಾಗಿದ್ದ. ಇಷ್ಟೇ ಅಲ್ಲದೆ ಮನಸ್ಸು ಸಿನಿಮಾ ರಂಗದತ್ತ ಸೆಳೆಯುತ್ತಿತ್ತು. ಗುರಿ ಸಾಧಿಸುವ ಛಲವೂ ಇತ್ತು. ಚಿರ ಯುವಕನಾಗಿದ್ದ ಕಿರಣ್‍ರಾಜ್ ಗಡಿನಾಡಿನಲ್ಲಿ ಮಾಡಿದ ಅನೇಕ ನಿರ್ದೇಶನದ ಪ್ರಯೋಗಗಳ ಫಲವಾಗಿ ಕಾವಳ, ಕಬ್ಬಿನ ಹಾಲು ಕಿರುಚಿತ್ರ ಮತ್ತು ಯಕ್ಷಗಾನ ಪಪ್ಪೆಟ್ಸ್ ಡಾಕ್ಯುಮೆಂಟ್ ಜನ ಮಾನಸವನ್ನು ತಲುಪಿತ್ತು. ಮತ್ತೆ ಆತ ಹಿಂತಿರುಗಿ ನೋಡಲೇ ಇಲ್ಲ. ಕನ್ನಡ ಸಿನಿಮಾ ಜಗತ್ತಿನಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇರಿಸುತ್ತಾ 'ಎಂದೆಂದಿಗೂ' ಮತ್ತು 'ರಿಕ್ಕಿ' ಕನ್ನಡ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದರು. ನಟ ರಕ್ಷಿತ್ ಶೆಟ್ಟಿ ಅವರ 'ಸೆವೆನ್ ಆಡ್ಸ್' ತಂಡದಲ್ಲಿ ಭಾಗಿಯಾಗಿರುವ ಕಿರಣ್ ರಾಜ್ 'ಕಿರಿಕ್ ಪಾರ್ಟಿ' ಚಿತ್ರದಲ್ಲೂ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವೂ ಇದೆ. ರಿಷಬ್ ಶೆಟ್ಟಿ ಅವರ ನಿರ್ಮಾಣದ 'ಕಥಾ ಸಂಗಮ' ಚಿತ್ರದಲ್ಲಿ ಬರುವ ರಿಷಬ್ ಮತ್ತು ಹರಿಪ್ರಿಯಾ ನಟನೆಯ ಸಾಗರ ಸಂಗಮ ಚಿತ್ರವನ್ನು ಕಿರಣ್ ಅವರು ನಿರ್ದೇಶಿಸಿದ ಗರಿಮೆಯೂ ಜತೆಗಿದೆ.
ಇದೀಗ ಕಾಸರಗೋಡಿಗ ಕಿರಣ್ ರಾಜ್ ಕೆ ನಿರ್ದೇಶನ, ಹಾಗೂ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಚಿತ್ರ ಕನ್ನಡ ಸೇರಿದಂತೆ ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಏಕಕಾಲಕ್ಕೆ ಇಂದು(ಜೂನ್ 10) ದೇಶ ವಿದೇಶಗಳಲ್ಲಿ ಬಿಡುಗಡೆಯಾಗಲಿದೆ. ಸದಾ ಒಂದಿಲ್ಲೊಂದು ಪ್ರಯೋಗಗಳನ್ನು ಮಾಡುವ ರಕ್ಷಿತ್ ಶೆಟ್ಟಿ ಮತ್ತು ತಂಡ ಈ ಬಾರಿ ಮುದ್ದಿನ ಶ್ವಾನ 'ಚಾರ್ಲಿ' ಸುತ್ತ ಕಥೆ ಹೆಣೆದು ಚಿತ್ರ ತಯಾರಿಸಿದ್ದಾರೆ.
ರಕ್ಷಿತ್ ಅವರ ಪರಂವಃ ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರವನ್ನು ಮಲಯಾಳಂನಲ್ಲಿ ಪ್ರಖ್ಯಾತ ನಟ, ನಿರ್ಮಾಪಕ ಪೃಥ್ವಿರಾಜ್ ಸುಕುಮಾರನ್ ಪ್ರಸ್ತುಪಡಿಸಿದ್ದಾರೆ. ಈಗಾಗಲೇ ದೇಶದಾದ್ಯಂತ ಪ್ರೀಮಿಯರ್ ಶೋ ನಡೆದಿದ್ದು, ಚಿತ್ರ ವೀಕ್ಷಿಸಿದ ಪ್ರತಿಯೋರ್ವರೂ ಚಿತ್ರವನ್ನು ಮೆಚ್ಚಿರುವುದು ಕಾಸರಗೋಡಿಗೆ ಸಂದ ಜಯ ಎನ್ನಬಹುದು.