ನ್ಯೂಯಾರ್ಕ್: ಹಾಲಿವುಡ್ನ ಖ್ಯಾತ ನಟ ದಂಪತಿಯ ನಡುವಿನ ಕಾನೂನು ಸಮರ ಕೊನೆಗೂ ಅಂತ್ಯಕೊಂಡಿದ್ದು, ಪತಿಯ ವಿರುದ್ಧ ಸಮರ ಸಾರಿದ್ದ ಪತ್ನಿಯೀಗ ಆತನಿಗೆ 10 ಮಿಲಿಯನ್ ಡಾಲರ್ (ಸುಮಾರು 78 ಕೋಟಿ ರೂಪಾಯಿ) ಪರಿಹಾರ ನೀಡಬೇಕಿದೆ.
ಇದು ಜ್ಯೂರಿ ಜಾನಿ ಡೆಪ್ ಮತ್ತು ಅಂಬರ್ ಹರ್ಡ್ ದಂಪತಿ ನಡುವಿನ ಗಲಾಟೆ.
ಅನೇಕ ವರ್ಷಗಳ ಡೇಟಿಂಗ್ನಲ್ಲಿ ಇದ್ದ ಈ ಜೋಡಿ 2015ರಲ್ಲಿ ಮದುವೆಯಾಗಿದೆ. ಆದರೆ ಮದುವೆಯಾದ ಒಂದೇ ವರ್ಷದಲ್ಲಿ ಇಬ್ಬರ ನಡುವೆ ಗಲಾಟೆ ಶುರುವಾಗಿದೆ. ಈ ಗಲಾಟೆ ವಿಕೋಪಕ್ಕೆ ಹೋಗಿದೆ. ನಂತರ ಡಿವೋರ್ಸ್ ಪಡೆದುಕೊಂಡು ಇಬ್ಬರೂ ದೂರವಾಗಿದ್ದಾರೆ.
ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಮಾಜಿ ಪತಿಯ ವಿರುದ್ಧ ಕಿಡಿ ಕಾರುತ್ತಿದ್ದ ಅಂಬರ್ ಹರ್ಡ್, ಆತನಿಗೆ ಬುದ್ಧಿ ಕಲಿಸುವ ಸಲುವಾಗಿ ಅವರ ವಿರುದ್ಧ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದರು. ಇದು ಭಾರಿ ಪ್ರಚಾರ ಪಡೆದಿತ್ತು. ಇದರಿಂದ ಜ್ಯೂರಿ ಜಾನಿ ಡೆಪ್ ಆಕ್ರೋಶಗೊಂಡಿದ್ದರು. ತಮ್ಮ ವಿರುದ್ಧ ಯಾವುದೇ ಹುರುಳು ಇಲ್ಲದ, ತಮ್ಮ ಗೌರವನ್ನು ಧಕ್ಕೆ ತರುವಂತೆ ಮಾಜಿ ಪತ್ನಿ ಬರೆದಿದ್ದಾರೆ ಎಂದು ಆರೋಪಿಸಿ ಅವರು, ಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು.
ಖ್ಯಾತ ತಾರಾ ದಂಪತಿಯಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಸಹಜವಾಗಿ ಭಾರಿ ಪ್ರಚಾರ ಗಳಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶರು, ಈ ಲೇಖನ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ತೀರ್ಮಾನಿಸಿದ್ದಾರೆ. ಜಾನಿ ಡೆಪ್ಗೆ ಪರಿಹಾರವಾಗಿ 10 ಮಿಲಿಯನ್ ಡಾಲರ್ ಮೊತ್ತ ಹಾಗೂ ದಂಡವಾಗಿ 5 ಮಿಲಿಯನ್ ಡಾಲರ್ ಹಣವನ್ನು ಪಾವತಿಸಲು ಆದೇಶಿಸಿದ್ದಾರೆ.
'ನನಗೆ ನ್ಯಾಯ ಸಿಕ್ಕಿದೆ. ನ್ಯಾಯದ ಪರ ಗೆಲುವು' ಎಂದು ಜಾನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, 'ಈ ತೀರ್ಪು ನನಗೆ ನಿರಾಸೆಯಾಗಿದೆ' ಎಂದು ಹರ್ಡ್ ಬರೆದುಕೊಂಡಿದ್ದಾರೆ. ಮಹಿಳೆಯರಿಗೆ ಈ ತೀರ್ಪು ಸರಿಯಾದ ಸಂದೇಶ ರವಾಣಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.