ನವದೆಹಲಿ:ವಿಶ್ವಾದ್ಯಂತ ವಲಸೆ ಪ್ರವತ್ತಿಗಳ ಮೇಲೆ ನಿಗಾಯಿರಿಸುವ ಹೆನ್ಲಿ ಗ್ಲೋಬಲ್ ಸಿಟಿಜನ್ಸ್ ವರದಿಯು 2022ರಲ್ಲಿ ಸುಮಾರು 8,000 ಕೋಟ್ಯಧೀಶರು ಭಾರತವನ್ನು ತೊರೆಯುವ ನಿರೀಕ್ಷೆಯಿದೆ ಎಂದು ಹೇಳಿದೆ. 2019ರಲ್ಲಿ 7,000 ಮಿಲಿಯಾಧೀಶರನ್ನು ಕಳೆದುಕೊಂಡ ಬಳಿಕ ಈ ವರ್ಷ ಈ ಸಂಖ್ಯೆ ಶೇ.14ರಷ್ಟು ಏರಿಕೆಯಾಗಿದೆ.
ಭಾರತವಲ್ಲದೆ ರಶ್ಯಾ, ಚೀನಾ, ಹಾಂಗ್‌ಕಾಂಗ್ ಮತ್ತು ಉಕ್ರೇನ್‌ಗಳಿಂದಲೂ ಮಿಲಿಯಾಧೀಶರು ನಿರ್ಗಮಿಸಬಹುದು. ಆದಾಗ್ಯೂ ಭಾರತವು ಪ್ರತಿವರ್ಷ ವಲಸೆಯಿಂದಾಗಿ ತಾನು ಕಳೆದುಕೊಳ್ಳುವುದಕ್ಕಿಂತ ಹೆಚ್ಚಿನ ಸಂಖ್ಯೆಯ ನವ ಕೋಟ್ಯಧೀಶರನ್ನು ಸೃಷ್ಟಿಸುತ್ತಿದೆ ಎಂದು ವರದಿಯು ಬೆಟ್ಟು ಮಾಡಿದೆ ಎಂದು scroll.in ವರದಿ ಮಾಡಿದೆ.
ಬೇರೆ ದೇಶಗಳಿಗೆ ವಲಸೆ ಹೋಗಿರುವ ಶ್ರೀಮಂತರು ಜೀವನ ಮಟ್ಟ ಸುಧಾರಣೆಯಾದ ಬಳಿಕ ಭಾರತಕ್ಕೆ ಮರಳಲಿದ್ದಾರೆ ಎಂದು ಹೇಳಿರುವ ನ್ಯೂ ವರ್ಲ್ಡ್ ವೆಲ್ತ್‌ನ ಸಂಶೋಧನಾ ಮುಖ್ಯಸ್ಥ ಆಯಂಡ್ರೂ ಅಮೊಲಿಸ್ ಅವರು, 2031ರ ವೇಳೆಗೆ ಭಾರತದಲ್ಲಿ ಮಿಲಿಯಾಧೀಶರ ಸಂಖ್ಯೆ ಶೇ.80ರಷ್ಟು ಹೆಚ್ಚುವ ನಿರೀಕ್ಷೆಯಿದೆ. ಇದರೊಂದಿಗೆ ಭಾರತವು ಈ ಅವಧಿಯಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಂಪತ್ತು ಮಾರುಕಟ್ಟೆಗಳಲ್ಲಿ ಒಂದಾಗಲಿದೆ. ವಿಶೇಷವಾಗಿ ಸ್ಥಳೀಯ ಹಣಕಾಸು ಸೇವೆಗಳು,ಆರೋಗ್ಯ ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸದೃಢ ಬೆಳವಣಿಗೆಯು ಇದಕ್ಕೆ ಪೂರಕವಾಗಿರಲಿದೆ ಎಂದಿದ್ದಾರೆ.
ಸಂಯುಕ್ತ ಅರಬ್ ಗಣರಾಜ್ಯ (ಯುಎಎಇ)ವು ಅತ್ಯಂತ ಹೆಚ್ಚಿನ ಮಿಲಿಯಾಧೀಶರನ್ನು ಆಕರ್ಷಿಸಲಿದೆ ಎಂದು ವರದಿಯು ಬಿಂಬಿಸಿದೆ. ಪಟ್ಟಿಯಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, 2022ರಲ್ಲಿ 2,800 ಮಿಲಿಯಾಧೀಶರ ಆಗಮನವನ್ನು ನಿರೀಕ್ಷಿಸಿರುವ ಸಿಂಗಾಪುರ ಮೂರನೇ ಸ್ಥಾನದಲ್ಲಿದೆ.
ಕಠಿಣ ತೆರಿಗೆ ನಿಯಮಗಳು ಮತ್ತು ಶಕ್ತಿಶಾಲಿ ಪಾಸ್‌ಪೋರ್ಟ್‌ಗಳನ್ನು ಹೊಂದುವ ಬಯಕೆಯು ಭಾರತದಿಂದ ಮಿಲಿಯಾಧೀಶರ ವಲಸೆಯನ್ನು ಪ್ರೇರೇಪಿಸುತ್ತಿದೆ ಎಂದು ಖೇತಾನ್ ಆಯಂಡ್ ಕಂಪನಿಯ ಪಾಲುದಾರ ಬಿಜಲ್ ಅಜಿಂಕ್ಯ ಹೇಳಿದರು.
ಸೆ.30ರವರೆಗೆ ಕಳೆದ ಏಳು ವರ್ಷಗಳಲ್ಲಿ 8,81,254 ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಕಳೆದ ಡಿಸೆಂಬರ್‌ನಲ್ಲಿ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಸಂಸತ್ತಿನಲ್ಲಿ ತಿಳಿಸಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಲಭ್ಯ ದತ್ತಾಂಶಗಳಂತೆ 1,33,83,718 ಭಾರತೀಯರು ಈಗ ವಿದೇಶಗಳಲ್ಲಿ ವಾಸವಾಗಿದ್ದಾರೆ ಎಂದು ಅವರು ನವಂಬರ್‌ನಲ್ಲಿ ಸಂಸತ್ತಿನಲ್ಲಿ ಹೇಳಿದ್ದರು.
2020ರಲ್ಲಿ ಸುಮಾರು 5,000 ಅಥವಾ ಒಟ್ಟು ಮಿಲಿಯಾಧೀಶರ ಪೈಕಿ ಶೇ.2ರಷ್ಟು ಶ್ರೀಮಂತರು ಭಾರತವನ್ನು ತೊರೆದಿದ್ದರು ಎಂದು ಗ್ಲೋಬಲ್ ವೆಲ್ತ್ ಮೈಗ್ರೇಷನ್ ರಿವ್ಯೆ ವರದಿಯು ಹೇಳಿದೆ.
2014ರಿಂದ 23,000 ಭಾರತೀಯ ಮಿಲಿಯಾಧೀಶರು ದೇಶವನ್ನು ತೊರೆದಿದ್ದಾರೆ ಎಂದು ಹೂಡಿಕೆ ಬ್ಯಾಂಕ್ ಮಾರ್ಗನ್ ಸ್ಟಾನ್ಲಿ ತನ್ನ 2018ರ ವರದಿಯಲ್ಲಿ ತಿಳಿಸಿತ್ತು.