ನಿರ್ಮಾಣದಿಂದ ನಿರ್ದೇಶನಕ್ಕೆ ಕಾಲಿಟ್ಟ ಕೆ ಎಂ ಶಶಿಧರ್ ಅವರ ಮೊದಲ ನಿರ್ದೇಶನದ ಚಿತ್ರ ಶುಗರ್ ಲೆಸ್ ಸಿನಿಮಾ ಜುಲೈ.8ಕ್ಕೆ ಬಿಡುಗಡೆಯಾಗಲಿದೆ.
ಸಕ್ಕರೆ ಕಾಯಿಲೆ ಕುರಿತು ಕೆಲವರಲ್ಲಿರುವ ಕಲ್ಪನೆ, ಭಯ ಇದನ್ನೆಲ್ಲ ಇಟ್ಟುಕೊಂಡು ಕಾಮಿಡಿ ಜೊತೆಗೆ ಮೆಸೇಜ್ ಹೇಳುವ ಪ್ರಯತ್ನವೇ ಶುಗರ್‌ಲೆಸ್. ಚಿತ್ರದಲ್ಲಿ ಪೃಥ್ವಿ ಅಂಬಾರ್ ಸಂತೋಷದಿಂದಿರುವ ವ್ಯಕ್ತಿಯಾಗಿ ನಟಿಸಿದ್ದು, ನಾಯಕ ನಟಿಯಾಗಿ ಪ್ರಿಯಾಂಕಾ ತಿಮ್ಮೇಶ್ ಕಾಣಿಸಿಕೊಂಡಿದ್ದಾರೆ.
ಚಿತ್ರದ ರಿಮೇಕ್ ಹಕ್ಕುಗಳಿಗೆ ಭಾರೀ ಬೇಡಿಕೆಯಿದೆ. ಹಿಂದಿ ರಿಮೇಕ್ ಹಕ್ಕನ್ನು ನಟ-ನಿರ್ಮಾಪಕ ಶಿವ ಆರ್ಯನ್ ಅವರಿಗೆ ಮಾರಾಟ ಮಾಡಲಾಗಿದೆ. ಬ್ಲ್ಯಾಕ್ ಪ್ಯಾಂಥರ್ ಮೂವೀಸ್ ಲಿಮಿಟೆಡ್ ಅಡಿಯಲ್ಲಿ ಚಿತ್ರ ಮೂಡಿ ಬರಲಿದೆ. ರಿಮೇಕ್ ಬಗ್ಗೆ ಶೀಘ್ರದಲ್ಲೇ ಅಧಿಕೃತ ಮಾಹಿತಿಗಳು ಹೊರಬರಲಿದೆ. ಹಿಂದಿಯ ಹೊರತಾಗಿ, ತಮಿಳು ಹಾಗೂ ತೆಲುಗು ನಿರ್ಮಾಣ ಸಂಸ್ಥೆಗಳೊಂದಿಗೂ ಮಾತುಕತೆಗಳು ನಡೆಯುತ್ತಿವೆ ಎಂದು ನಿರ್ಮಾಪಕ ಶಶಿಧರ್ ಹೇಳಿದ್ದಾರೆ.
ಹಿಂದಿ ಆವೃತ್ತಿಗೆ ಬಾಲಿವುಡ್‌ನ ಪ್ರಸಿದ್ಧ ನಟರನ್ನು ಆಯ್ಕೆ ಮಾಡಲು ನಿರ್ಮಾಪಕರು ಚಿಂತನೆ ನಡೆಸುತ್ತಿದ್ದು, ಶಶಿಧರ್ ಅವರಿಗೆ ನಿರ್ದೇಶನ ಮಾಡುವ ಆಫರ್ ನೀಡಿದ್ದಾರೆಂದು ತಿಳಿದುಬಂದಿದೆ.
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ಶಶಿಧರ್ ಕೆ.ಎಂ. ಅವರೇ ಶುಗಲ್ ಲೆಸ್ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣವನ್ನೂ ಮಾಡಿದ್ದು, ಸಹ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾಥ್ ನೀಡಿದ್ದಾರೆ.
ಲವಿತ್ ಅವರ ಛಾಯಾಗ್ರಹಣ, ಅನೂಪ್ ಸೀಳಿನ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಗುರು ಕಶ್ಯಪ್ ಚಿತ್ರದ ಸಂಭಾಷಣೆ ರಚಿಸಿದ್ದಾರೆ. ಚಿತ್ರದ ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ ಮಾಸ್ಟರ್, ಕಲೆ ವಿನ್ಯಾಸವನ್ನು ರೂಪೇಂದ್ರ ಆಚಾರ್ ಮಾಡಿದ್ದಾರೆ.
ಪೃಥ್ವಿ ಅಂಬಾರ್, ಪ್ರಿಯಾಂಕ ತಿಮ್ಮೇಶ್ ಪ್ರಮುಖ ಪಾತ್ರದಲ್ಲಿದ್ದು, ಉಳಿದಂತೆ ಹಿರಿಯ ನಿರ್ದೇಶಕ ಎಸ್.ನಾರಾಯಣ್, ರಘು ರಾಮನಕೊಪ್ಪ, ಧರ್ಮಣ್ಣ ಕಡೂರ್, ನವೀನ್ ಡಿ.ಪಡೀಲ್, ಗಿರೀಶ್ ಜತ್ತಿ, ಹೊನ್ನವಳ್ಳಿ ಕೃಷ್ಣ, ಮಾಲತಿ ಅಭಿನಯಿಸಿದ್ದಾರೆ.
ದಿಯಾ ಚಿತ್ರದ ಬಳಿಕ ಪೃಥ್ವಿ ಅಂಬಾರ್ ಅವರ ಯಾವುದೇ ಚಿತ್ರಗಳೂ ಬಿಡುಗಡೆಯಾಗಿರಲಿಲ್ಲ. ಆದರೆ, ಇದೀಗ ಒಂದಾದ ಒಂದರಂತೆ ಬಿಡುಗಡೆಗೊಳ್ಳುತ್ತಿವೆ. ಶುಗರ್ ಲೆಸ್ ಚಿತ್ರದ ಬಳಿಕ ಪೃಥ್ವಿ ಅಂಬರ್ ಅವರನ್ನು ಬೈರಾಗಿ ಚಿತ್ರದಲ್ಲಿ ನೋಡಬಹುದಾಗಿದೆ. ಈ ಚಿತ್ರವು ಜುಲೈ.1 ರಂದು ಬಿಡುಗಡೆಯಾಗಲಿದೆ.