ನವದೆಹಲಿ: ದೇಶದ ಅಭಿವೃದ್ಧಿಗೆ ವೇಗವನ್ನು ನೀಡುವಲ್ಲಿ ಪ್ರತಿಯೊಂದು ಕ್ಷೇತ್ರದ ಬಲಪಡಿಸುವಿಕೆಯಲ್ಲಿ ತಮ್ಮ ಸರ್ಕಾರ ನಂಬಿಕೆ ಹೊಂದಿರುವುದಾಗಿ ಗುರುವಾರ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಇತರ ಕ್ಷೇತ್ರಗಳನ್ನು ನಿರ್ಲಕ್ಷಿಸಿ, ಕೆಲವೇ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಹಿಂದಿನ ವಿಧಾನವನ್ನು ಅದು ಬದಲಾಯಿಸಿದೆ ಎಂದು ಪ್ರತಿಪಾದಿಸಿದ್ದಾರೆ.
ಎರಡು ದಿನಗಳ 'ಬಯೋಟೆಕ್ ಸ್ಟಾರ್ಟ್ ಅಪ್ ಎಕ್ಸ್ ಪೋ' ಉದ್ಘಾಟಿಸಿ ಮಾತನಾಡಿದ ಮೋದಿ, ಕಳೆದ ಎಂಟು ವರ್ಷಗಳಲ್ಲಿ ದೇಶದ ಜೈವಿಕ ಆರ್ಥಿಕತೆ 8 ಪಟ್ಟು ಹೆಚ್ಚಾಗಿದೆ. 10 ಬಿಲಿಯನ್ ಅಮೆರಿಕನ್ ಡಾಲರ್ ನಿಂದ 80 ಬಿಲಿಯನ್ ಅಮೆರಿಕನ್ ಡಾಲರ್ ಗೆ ತಲುಪಿದೆ. ಜೈವಿಕ ತಂತ್ರಜ್ಞಾನದ ಜಾಗತಿಕ ವ್ಯವಸ್ಥೆಯಲ್ಲಿ ಅಗ್ರ 10 ದೇಶಗಳ ಗುಂಪು ತಲುಪಲು ದೇಶಕ್ಕೆ ಇನ್ನೂ ದೂರವಿಲ್ಲ ಎಂದರು.
ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ನೂರಾರುಗಳಿಂದ 70,000 ಕ್ಕೆ ಏರಿದೆ. ತಮ್ಮ ಸರ್ಕಾರ ವ್ಯವಹಾರವನ್ನು ಸುಲಭಗೊಳಿಸಲು ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸಲು ಕೆಲಸ ಮಾಡಿದೆ ಎಂದು ಹೇಳಿದರು.
ಈ 70,000 ಸ್ಟಾರ್ಟಪ್‌ಗಳಿಂದ ಸುಮಾರು 60 ವಿವಿಧ ಕೈಗಾರಿಕೆಗಳಲ್ಲಿ ಸ್ಥಾಪನೆಯಾಗಿವೆ. ಕೆಲವು ವಲಯಗಳಿಂದ ರಫ್ತು ದಾಖಲೆ ಮಟ್ಟಕ್ಕೆ ತಲುಪಿದೆ. ಪ್ರತಿಯೊಂದು ಕ್ಷೇತ್ರವನ್ನು ಬೆಂಬಲಿಸುವುದು ಮತ್ತು ಅಭಿವೃದ್ಧಿಪಡಿಸುವುದು ದೇಶದ ಅಗತ್ಯವಾಗಿದೆ ಮತ್ತು ತಮ್ಮ ಸರ್ಕಾರ ದೇಶದ ಅಭಿವೃದ್ಧಿಗೆ ವೇಗ ನೀಡಲು ಎಲ್ಲಾ ಮಾರ್ಗಗಳನ್ನು ಅನ್ವೇಷಿಸುತ್ತಿದೆ ಎಂದು ಅವರು ತಿಳಿಸಿದರು.