ಅಹಮದಾಬಾದ್: ಗುಜರಾತ್, ಮಹಾರಾಷ್ಟ್ರ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯಾದ್ಯಂತ ವ್ಯಾಪಿಸಿರುವ ಮಹತ್ವಾಕಾಂಕ್ಷೆಯ ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆಗೆ ಅಗತ್ಯವಿರುವ ಒಟ್ಟು ಭೂಮಿಯಲ್ಲಿ ಶೇ. 90ಕ್ಕೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಯೋಜನೆಯ ಅನುಷ್ಠಾನ ಸಂಸ್ಥೆ ಎನ್‌ಎಚ್‌ಎಸ್‌ಆರ್‌ಸಿಎಲ್ ಸೋಮವಾರ ತಿಳಿಸಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇಂದು ಗುಜರಾತ್‌ನ ಸೂರತ್ ಮತ್ತು ನವಸಾರಿ ಜಿಲ್ಲೆಗಳಲ್ಲಿ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು ಮತ್ತು 2026 ರಲ್ಲಿ ರಾಜ್ಯದ ಸೂರತ್ ಮತ್ತು ಬಿಲಿಮೋರಾ ನಡುವೆ ಮೊದಲ ರೈಲು ಓಡಾಟವನ್ನು ಪ್ರಾರಂಭಿಸುವ ವಿಶ್ವಾಸವಿದೆ ಎಂದು ಹೇಳಿದರು.
ಹೈಸ್ಪೀಡ್ ಬುಲೆಟ್ ರೈಲು ಅಹಮದಾಬಾದ್‌ನಿಂದ ಮುಂಬೈಗೆ 508-ಕಿಮೀ ಪ್ರಯಾಣವನ್ನು 2 ಗಂಟೆ 58 ನಿಮಿಷಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ.
ಯೋಜನೆಗೆ ಅಗತ್ಯವಿರುವ 1,396 ಹೆಕ್ಟೇರ್ ಭೂಮಿಯಲ್ಲಿ, 1,260.76 ಹೆಕ್ಟೇರ್ ಅಥವಾ ಶೇಕಡಾ 90.31 ರಷ್ಟು ಭೂಮಿಯನ್ನು ಜೂನ್ 5ರ ವರೆಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಯೋಜನೆಯನ್ನು ಕಾರ್ಯಗತಗೊಳಿಸಲು ರಚನೆಯಾದ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್(ಓಊSಖಅಐ) ತಿಳಿಸಿದೆ.
ಎನ್‌ಎಚ್‌ಎಸ್‌ಆರ್‌ಸಿಎಲ್ ಬಿಡುಗಡೆ ಮಾಡಿರುವ ವಿವರಗಳ ಪ್ರಕಾರ, ಗುಜರಾತ್‌ನಲ್ಲಿ ಯೋಜನೆಗೆ ಅಗತ್ಯವಿರುವ ಶೇ.98.79 ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, ನೆರೆಯ ಮಹಾರಾಷ್ಟ್ರದಲ್ಲಿ ಈ ಪ್ರಮಾಣ ಶೇ.71.49ರಷ್ಟಿದೆ. ಅಲ್ಲದೆ, ದಾದ್ರಾ ಮತ್ತು ನಗರ್ ಹವೇಲಿ ವ್ಯಾಪ್ತಿಯಲ್ಲಿ ಅಗತ್ಯವಿರುವ ಎಲ್ಲಾ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಎನ್‌ಎಚ್‌ಎಸ್‌ಆರ್‌ಸಿಎಲ್ ಹೇಳಿದೆ.