ನವದೆಹಲಿ: ಜೂನ್ 10 ರಂದು ನಡೆದ ರಾಜ್ಯಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಸಂಸತ್ತಿನ ನಿರ್ಣಾಯಕ ಮೇಲ್ಮನೆಯಲ್ಲಿ ಆಡಳಿತಾರೂಢ ಬಿಜೆಪಿಯ ಸಂಖ್ಯಾಬಲ 95 ರಿಂದ 92ಕ್ಕೆ ಕುಸಿದಿದೆ. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಸಂಖ್ಯೆ 29 ರಿಂದ 31 ಕ್ಕೆ ಏರಿಕೆಯಾಗಿದ್ದು, ಕೈ ಸ್ವಲ್ಪ ಬಲ ಹೆಚ್ಚಿಸಿಕೊಂಡಿದೆ.
ರಾಜಸ್ಥಾನ, ಹರಿಯಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದ ನಾಲ್ಕು ರಾಜ್ಯಗಳಲ್ಲಿ ತೀವ್ರ ಪೈಪೋಟಿಗೆ ಸಾಕ್ಷಿಯಾದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳ ಪೈಕಿ 22 ರಲ್ಲಿ ಗೆದ್ದರೆ, ಕಾಂಗ್ರೆಸ್ ಒಂಬತ್ತು ಸ್ಥಾನಗಳನ್ನು ಗೆದ್ದಿದೆ.
ನಿವೃತ್ತಿ ಹೊಂದಿದ 57 ಸದಸ್ಯರ ಪೈಕಿ ಬಿಜೆಪಿ 25 ಸದಸ್ಯರನ್ನು ಹೊಂದಿತ್ತು ಮತ್ತು ಕಾಂಗ್ರೆಸ್ ಏಳು ಸದಸ್ಯರನ್ನು ಹೊಂದಿತ್ತು.
ಹೆಚ್ಚಿನ ಬಲದೊಂದಿಗೆ, ಯುವ ಮುಖಗಳನ್ನು ನಾಮನಿರ್ದೇಶನ ಮಾಡಿದ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಮೇಲ್ಮನೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಆಕ್ರಮಣಕಾರಿ ಹೋರಾಟ ನಡೆಸಲಿದೆ ಎಂದು ನಿರೀಕ್ಷಿಸಲಾಗಿದೆ.