ತಿರುವನಂತಪುರ: ಅಂಜುತೆಂಗು ಎಂಬಲ್ಲಿ ಹಳಸಿದ ಮೀನು ಪತ್ತೆಯಾಗಿದೆ. ಆಹಾರ ಸುರಕ್ಷಾ ಇಲಾಖೆ ಇಂದು ನಡೆಸಿದ ಮಿಂಚಿನ ತಪಾಸಣೆ ವೇಳೆ ಸುಮಾರು 9,600 ಕೆಜಿ ಹಳಸಿದ ಮೀನನ್ನು ವಶಪಡಿಸಿಕೊಂಡಿದೆ. ಖಾಸಗಿ ಮೀನು ಮಾರುಕಟ್ಟೆಯಿಂದ ಕೊಳೆತ ಮೀನುಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಗಿದೆ.
ಐವರು ಲಾರಿ ಮಾಲೀಕರು ನಡೆಸುತ್ತಿರುವ ಎಂಜೆ ಲ್ಯಾಂಡ್ ಮಾರ್ಕೆಟ್ ನಲ್ಲಿ ಖಾದ್ಯಕ್ಕೆ ಯೋಗ್ಯವಲ್ಲದ ಮೀನುಗಳನ್ನು ಸಂಗ್ರಹಿಸಲಾಗಿತ್ತು. ಅಷ್ಟೂ ಮೀನುಗಳನ್ನು ಹೊರ ರಾಜ್ಯಗಳಿಂದ ತರಲಾಗಿತ್ತು. 25 ಟ್ಯಾಂಕರ್‌ಗಳಲ್ಲಿ ಮೀನು ಸಂಗ್ರಹಿಸಲಾಗಿತ್ತು. ಕೊಳೆತ ಸ್ಥಿತಿಯಲ್ಲಿ ವಿವಿಧ ರೀತಿಯ ಮೀನುಗಳಾದ ಚೂರ, ನಾತೋಳಿ, ಚಾಳ ಪತ್ತೆಯಾಗಿವೆ.
ವಶಪಡಿಸಿದ ಮೀನುಗಳು ಜೆಸಿಬಿ ಬಳಸಿ ದೊಡ್ಡ ಗುಂಡಿ ತೋಡಿ ಹೂಳಲಾಯಿತು. ಆಹಾರ ಸುರಕ್ಷಾ ಇಲಾಖೆಯ ಮೊಬೈಲ್ ಲ್ಯಾಬ್‌ನಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಮೀನುಗಳಲ್ಲಿ ಹೆಚ್ಚಿನ ಪ್ರಮಾಣದ ಅಮೋನಿಯಾ ಕಂಡುಬಂದಿದೆ.ವಿಸ್ತೃತ ಪರೀಕ್ಷೆಗಾಗಿ ಇಲ್ಲಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ.