ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಮತ್ತು ರಾಹುಲ್ ಗಾಂಧಿಗೆ ಸಮನ್ಸ್ ಜಾರಿ ಮಾಡಿದೆ.
ನ್ಯಾಷನಲ್ ಹೆರಾಲ್ಡ್ (National Herald)ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ (money laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 8 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (sonia gandhi) ಮತ್ತು ಅವರ ಪುತ್ರ ರಾಹುಲ್ ಗಾಂಧಿಗೆ (Rahul Gandhi) ಸಮನ್ಸ್ ಜಾರಿ ಮಾಡಿದೆ ಎಂದು ತಿಳಿದುಬಂದಿದೆ. 2015 ರಲ್ಲಿ ತನಿಖಾ ಸಂಸ್ಥೆಯಿಂದ ಮುಕ್ತಾಯವಾಗಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದೊಂದಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿದೆ.
ಈ ಬಗ್ಗೆ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಇದನ್ನು ಖಚಿತಪಡಿಸಿದ್ದು, ಸೋನಿಯಾ ಗಾಂಧಿ ಅವರು ಹೇಳಿದ ದಿನಾಂಕದಂದು ಅಗತ್ಯವಿದ್ದಲ್ಲಿ ಹಾಜರಾಗುತ್ತಾರೆ. ಆದರೆ ಪಕ್ಷವು ತನಿಖಾ ಸಂಸ್ಥೆಗೆ ಪತ್ರ ಬರೆದು ರಾಹುಲ್ ಗಾಂಧಿಗೆ ಕೆಲವು ವಿನಾಯಿತಿಗಳನ್ನು ಕೋರುತ್ತದೆ. ಮನಿ ಲಾಂಡರಿಂಗ್ ಅಥವಾ ಯಾವುದೇ ಹಣ ವಿನಿಮಯದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಸಿಂಘ್ವಿ ಹೇಳಿದ್ದಾರೆ.
ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಹಾಗೂ ವಕ್ತಾರ ರಣದೀಪ್ ಸುರ್ಜೇವಾಲಾ, ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಆರಂಭವಾಗಿದ್ದು 1942ರಲ್ಲಿ. ಅಂದು ಬ್ರಿಟಿಷರು ಪತ್ರಿಕೆಯನ್ನು ಹತ್ತಿಕ್ಕಲು ಪ್ರಯತ್ನ ಮಾಡಿದರು. ಇಂದು ಮೋದಿ ಸರ್ಕಾರವೂ ಅದನ್ನೇ ಮಾಡುತ್ತಿದೆ ಮತ್ತು ಇದಕ್ಕೆ ಜಾರಿ ನಿರ್ದೇಶನಾಲಯವನ್ನು ಬಳಸಲಾಗುತ್ತಿದೆ. ಇಡಿ ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ನೋಟಿಸ್ ನೀಡಿದೆ ಎಂದು ಕಿಡಿಕಾರಿದ್ದಾರೆ.