ಕರಾಚಿ: ನಟಿ ಆಲಿಯಾ ಭಟ್ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದ ದೃಶ್ಯವೊಂದನ್ನು ಪಾಕಿಸ್ತಾನದ ಕರಾಚಿಯ ರೆಸ್ಟೋರೆಂಟ್‌ವೊಂದರಲ್ಲಿ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿದ್ದು, ಇದರ ವಿರುದ್ಧ ನೆಟ್ಟಿಗರು ತೀವ್ರ ಕಿಡಿಕಾರಿದ್ದಾರೆ.
'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದಲ್ಲಿ ಆಲಿಯಾ ಭಟ್ ಅವರು ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬೇರೆಯವರ ಆಸೆಗೆ ಬಲಿಯಾದ ಗಂಗೂಬಾಯಿ ವೇಶ್ಯೆಯಾಗುವ ಪರಿಸ್ಥಿತಿ ಬರುತ್ತದೆ. ಬೇರೆ ದಾರಿಯಿಲ್ಲದೆ ಅದೇ ವೃತ್ತಿಯಲ್ಲಿ ಮುಂದುವರೆಯುವ ಆಕೆ ಆಮೇಲೆ ಚುನಾವಣೆಯಲ್ಲಿ ಗೆದ್ದು, ಸಾಮಾಜಿಕ ಕೆಲಸವನ್ನೂ ಮಾಡುತ್ತ ಎಲ್ಲರಿಂಚ ಚಪ್ಪಾಳೆ ಗಿಟ್ಟಿಸಿಕೊಂಡು ಗೌರವ ಪಡೆಯುತ್ತಾಳೆ.
ಸಿನಿಮಾದಲ್ಲಿ ಗಂಗೂಬಾಯಿ (ಆಲಿಯಾ ಭಟ್) ತನ್ನ ಗ್ರಾಹಕರನ್ನು ಕರೆಯುವ ದೃಶ್ಯವಿದೆ. ಇದೇ ದೃಶ್ಯವನ್ನಿಟ್ಟುಕೊಂಡು ಕರಾಚಿ ರೆಸ್ಟೋರೆಂಟ್ ಪ್ರಚಾರ ಮಾಡುತ್ತಿದೆ. ಗಂಗೂಬಾಯಿ ಗಿರಾಕಿಗಳಿಗಾಗಿ ಬೀದಿಯಲ್ಲಿ ನಿಂತು ಕರೆಯುವ ದೃಶ್ಯವಿದೆ. ಇದನ್ನು ಇಟ್ಟುಕೊಂಡು ರೆಸ್ಟೋರೆಂಟ್ ಪ್ರಚಾರ ಮಾಡುತ್ತಿದೆ. "ಸೋಮವಾರ 25% ರಿಯಾಯಿತಿ ನೀಡುತ್ತಿದ್ದೇವೆ, ಆಜಾ ನಾ ರಾಜಾ.. ಯಾಕೆ ಕಾಯುತ್ತಿದ್ದೀರಿ? ಎಂದು ಜಾಹೀರಾತಿಗೆ ಅಡಿಬರಹ ನೀಡಲಾಗಿದೆ. ಈ ಜಾಹೀರಾತು ನೋಡಿ ಅನೇಕರು ಬೇಸರ ಹೊರಹಾಕಿದ್ದು, ಚೀಪ್ ಪ್ರಚಾರ ಎಂದು ನಿಂದಿಸಿದ್ದಾರೆ.
"ಜಾಹೀರಾತು ಹಾಕುವ ಮುನ್ನ ನೀವು ಒಮ್ಮೆ ಏನು ಹಾಕುತ್ತಿದ್ದೀರಿ ಎಂದು ಯೋಚಿಸಬೇಕಿತ್ತು. ಒಂದು ನೋವು ನೀಡುವ ದೃಶ್ಯವನ್ನು ಈ ರೀತಿ ಆಫರ್ ನೀಡುವ ಜಾಹೀರಾತಿಗೆ ಬಳಸಿಕೊಳ್ಳಬಾರದಿತ್ತು ಎಂದು ಟೀಕಿಸಿದ್ದಾರೆ. ಮತ್ತೋರ್ವ ಟ್ವಿಟರ್ ಖಾತೆದಾರ, 'ಈ ರೀತಿ ಮಾಡಿ ಮಾರ್ಕೇಟಿಂಗ್ ಮಾಡುತ್ತೀರಿ, ಪಬ್ಲಿಸಿಟಿ ಸಿಗತ್ತೆ, ಗಮನ ಸೆಳೆಯುತ್ತೀರಿ ಎಂದಾದರೆ ಅದು ತಪ್ಪು. ಒಂದು ವೇಶ್ಯೆಯ ಬದುಕಿನ ಕುರಿತಾದ ಸಿನಿಮಾ ಕ್ಲಿಪ್ ಇಟ್ಟುಕೊಂಡು ನೀವು ಈ ರೀತಿ ಪ್ರಚಾರ ಮಾಡುತ್ತೀರಿ ಎಂದರೆ ನೀವು ಎಷ್ಟು ಕೀಳಾಗಿ ಯೋಚನೆ ಮಾಡುತ್ತೀರಿ ಎಂದು ಗೊತ್ತಾಗುತ್ತದೆ ಎಂದು ಟೀಕಿಸಿದ್ದಾರೆ.
ಗಂಗೂಬಾಯಿ ಕಾಥಿಯಾವಾಡಿ' ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವ್‌ಗನ್ ಮುಂತಾದವರು ನಟಿಸಿದ್ದಾರೆ. ಬರೋಬ್ಬರಿ 22 ವರ್ಷಗಳ ಲಾಂಗ್ ಗ್ಯಾಪ್ ನಂತರ ಸಂಜಯ್ ಲೀಲಾ ಬನ್ಸಾಲಿ ಹಾಗೂ ಅಜಯ್ ದೇವ್‌ಗನ್ ಈ ಚಿತ್ರದ ಮೂಲಕ ಒಂದಾಗಿದ್ದು, ಈ ಸಿನಿಮಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲಿಯೂ ಎಂದಿಗೂ ನೋಡಿರದ ಆಲಿಯಾ ಭಟ್ ಅವರನ್ನು ಈ ಸಿನಿಮಾದಲ್ಲಿ ನೋಡಬಹುದು ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದರು.