ನವದೆಹಲಿ: ಹಿಮ ಸರೋವರಗಳ ಆಘಾತಕಾರಿ ವಿಸ್ತರಣೆ, ನದಿಗಳ ಮಾಲಿನ್ಯ, ಕಡಲ್ಕೊರೆತ ಸೇರಿದಂತೆ ಭಾರತದ ಪರಿಸರ ವ್ಯವಸ್ಥೆಯ ಭಯಾನಕ ಚಿತ್ರಣವನ್ನು "ಸ್ಟೇಟ್ ಆಫ್ ಇಂಡಿಯಾಸ್ ಎನ್ವಿರಾನ್‍ಮೆಂಟ್ -2022" ವರದಿ ತೆರೆದಿಟ್ಟಿದೆ.
ಭಾರತ, ಚೀನಾ ಹಾಗೂ ನೇಪಾಳದ 25ಕ್ಕೂ ಹೆಚ್ಚು ಹಿಮ ಸರೋವರಗಳ ಜಲ ಪ್ರದೇಶ 2009ರಿಂದೀಚೆಗೆ ವ್ಯಾಪಕವಾಗಿ ಹೆಚ್ಚಿದ್ದು, ಇದು ಭಾರತದ ಐದು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಿಗೆ ಅಪಾಯ ಸಾಧ್ಯತೆಯನ್ನು ಸೂಚಿಸುತ್ತದೆ ಎಂದು ಸೆಂಟರ್ ಫಾರ್ ಸೈನ್ಸ್ ಆಯಂಡ್ ಎನ್ವಿರಾನ್‍ಮೆಂಟ್ ಪ್ರಕಟಿಸಿದ ಈ ವರದಿ ಹೇಳಿದೆ.
ಅಸ್ಸಾಂ, ಹಿಮಾಚಲ ಪ್ರದೇಶ, ಸಿಕ್ಕಿಂ, ಬಿಹಾರ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ ಮತ್ತು ಲಡಾಖ್‍ಗೆ ಇದರಿಂದ ಅಪಾಯವಿದೆ ಎಂದು ವರದಿ ವಿವರಿಸಿದೆ.
ಭಾರತದ ಕರಾವಳಿ ತೀರದ ಶೇಕಡ 33ರಷ್ಟು ಪ್ರದೇಶಗಳಲ್ಲಿ 1990 ರಿಂದ 2018ರ ಅವಧಿಯಲ್ಲಿ ವ್ಯಾಪಕ ಕಡಲ್ಕೊರೆತ ಸಂಭವಿಸಿದ್ದು, ಪಶ್ಚಿಮ ಬಂಗಾಳದಲ್ಲಿ ಶೇಕಡ 60ರಷ್ಟು ಕಡೆಗಳಲ್ಲಿ ಕರಾವಳಿ ತೀರದಲ್ಲಿ ಕೊರೆತ ಕಂಡುಬಂದಿದೆ ಎಂದೂ ವರದಿ ಉಲ್ಲೇಖಿಸಿದೆ.
ಚಂಡಮಾರುತಗಳು ಹೆಚ್ಚಿರುವುದು ಹಾಗೂ ಸಮುದ್ರದ ಮಟ್ಟ ಹೆಚ್ಚಳ, ಬಂದರುಗಳ ನಿರ್ಮಾಣ, ಕಡಲ ಕಿನಾರೆಯಲ್ಲಿ ಗಣಿಗಾರಿಕೆ ಮತ್ತು ಅಣೆಕಟ್ಟುಗಳ ನಿರ್ಮಾಣದಂಥ ನಿರ್ಮಾಣ ಚಟುವಟಿಕೆಗಳು ಕಡಲ್ಕೊರೆತಕ್ಕೆ ಪ್ರಮುಖ ಕಾರಣ ಎಂದು ವಿವರಿಸಲಾಗಿದೆ.
ಅಂತೆಯೇ ಶೇಕಡ 75ರಷ್ಟು ನದಿ ವೀಕ್ಷಣಾ ಕೇಂದ್ರಗಳಲ್ಲಿ ವಿಷಕಾರಿ ಘನ ಲೋಹಗಳಾದ ಸತು, ಕಬ್ಬಿಣ, ನಿಕ್ಕೆಲ್, ಕ್ಯಾಡ್ಮಿಯಂ, ಅರ್ಸೆನಿಕ್, ಕ್ರೋಮಿಯಂ ಅಧಿಕ ಪ್ರಮಾಣ ಇರುವುದನ್ನು ಕೂಡಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. 117 ನದಿ ಹಾಗೂ ಉಪನದಿಗಳಲ್ಲಿ ಅಧಿಕ ಪ್ರಮಾಣದ ವಿಷಲೋಹಗಳು ಪತ್ತೆಯಾಗಿವೆ.
ದೇಶದಲ್ಲಿ ಶೇಕಡ 45 ರಿಂದ 64ರಷ್ಟು ಅರಣ್ಯ ಪ್ರದೇಶ ಕೂಡಾ 2030ರ ವೇಳೆಗೆ ಹವಾಗುಣ ಹಾಟ್‍ಸ್ಪಾಟ್‍ಗಳಾಗಿ ಬದಲಾಗುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. ಹವಾಮಾನ ಬದಲಾವಣೆಯ ಪರಿಣಾಮ 2085ರ ವೇಳೆಗೆ ಭೀಕರವಾಗಲಿದೆ ಎಂದೂ ವರದಿ ಎಚ್ಚರಿಸಿದೆ.