ಕಾಸರಗೋಡು:ಜಿಲ್ಲೆಯ ಜನತೆಯ ಧನ್ವಂತರಿ ಎನಿಸಿರುವ ಕಾಸರಗೋಡು ಜನರಲ್ ಆಸ್ಪತ್ರೆ ವಿರುದ್ಧ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ತೋರುವ ಅವಗಣನೆ ಕೊನೆಗೊಳಿಸದಿದ್ದಲ್ಲಿ ಜನಸಾಮಾನ್ಯರನ್ನು ಒಟ್ಟುಸೇರಿಸಿ ಬಿಜೆಪಿ ನೇರ ಆಂದೋಲನಕ್ಕೆ ಇಳಿಯಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ ಹೇಳಿದರು.
ಅವರು ಕಾಸರಗೋಡು ಜನರಲ್ ಆಸ್ಪತ್ರೆ ವಿರುದ್ಧದ ನಿರ್ಲಕ್ಷ್ಯ ವಿರೋಧಿಸಿ ಬಿಜೆಪಿ ಕಾಸರಗೋಡು ಕ್ಷೇತ್ರ ಸಮಿತಿ ವತಿಯಿಂದ ನಡೆದ ಸಂಜೆ ಧರಣಿಯನ್ನು ಉದ್ಘಾಟಿಸಿ ಮಾತನಾಡಿದರು.
ಜನರಲ್ ಆಸ್ಪತ್ರೆ ಹಾಗೂ ಸುತ್ತುಮುತ್ತು ಹೊಲಸು ಗಬ್ಬು ನಾರುತ್ತಿದೆ. ಆಸ್ಪತ್ರೆಗೆ ಬರುವ ಜನರು ಸೊಳ್ಳೆಗಳಿಂದ ಹರಡುವ ರೋಗಗಳಿಗೆ ತುತ್ತಾಗುತ್ತಿದ್ದಾರೆ. ್ರಯೋಗಾಲಯದ ಮಿತಿಗಳಿಂದಾಗಿ, ಹೆಚ್ಚಿನ ಪ್ರಯೋಗಾಲಯ ಪರೀಕ್ಷೆಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ಮಾಡಬೇಕಾಗಿದೆ ಇದರಿಂದ ಬಡಜನತೆ ಸಮಸ್ಯೆ ಎದುರಿಸಬೇಕಾಗುತ್ತಿದೆ. ಬಿಜೆಪಿ ಕಾಸರಗೋಡು ಮಂಡಲ ಸಮಿತಿ ಅಧ್ಯಕ್ಷೆ ಪ್ರಮೀಳಾ ಮಜಲ್ ಅಧ್ಯಕ್ಷತೆ ವಹಿಸಿದ್ದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರ್, ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಜಿಲ್ಲಾ ಕಾರ್ಯದರ್ಶಿ ಎಂ.ಎಸ್. ಉಮಾ, ರಾಜ್ಯ ಸಮಿತಿ ಸದಸ್ಯ ಎನ್. ಸತೀಶನ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾ ಗೋಪಾಲನ್, ಎಸ್.ಎ.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಸಂಪತ್ ಕುಮಾರ್ ಪೆರ್ನಡ್ಕ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು,ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪ್ರಭು, ಕ್ಷೇತ್ರದ ಕಾರ್ಯದರ್ಶಿ ಅಶೋಕ್ ಚೆಟ್ಯಾರ್, ಪುರಸಭೆ ಹಾಗೂ ಪಂಚಾಯತ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸುಕುಮಾರ್ ಕುದುರೆಪಾಡಿ ಸ್ವಾಗತಿಸಿದರು. ನಗರಸಭಾ ಸದಸ್ಯೆ ವೀಣಾ ಅರುಣ್ ಶೆಟ್ಟಿ ವಂದಿಸಿದರು.