ನವದೆಹಲಿ: ಬಿಜೆಪಿ ನಾಯಕರು ಪ್ರವಾದಿ ಮೊಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ವಿಷಯವಾಗಿ ಕತಾರ್, ಕುವೈತ್ ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿಗೊಳಿಸಿದ್ದು, ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರ ಹೇಳಿಕೆಯನ್ನು ಗಲ್ಫ್ ರಾಷ್ಟ್ರಗಳು ತಿರಸ್ಕರಿಸಿ, ಖಂಡಿಸಿವೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕತಾರ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಬಿಜೆಪಿ ನಾಯಕರ ಹೇಳಿಕೆಗಳು ಯಾವುದೇ ರೀತಿಯಲ್ಲಿಯೂ ಸರ್ಕಾರದ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ, ಇವು ಪ್ರಧಾನವಲ್ಲದ ಅಂಶಗಳು ಎಂದು ಹೇಳಿದ್ದಾರೆ.
ವಿದೇಶಾಂಗ ಕಚೇರಿಯಲ್ಲಿ ಕತಾರ್ ನಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ಸಭೆ ನಡೆಸಿದ್ದು, ಈ ಸಭೆಯಲ್ಲಿ ಭಾರತದಲ್ಲಿ ವ್ಯಕ್ತಿಗಳು ಧಾರ್ಮಿಕ ವ್ಯಕ್ತಿಯ ಬಗ್ಗೆ ಅವಹೇಳನಕಾರಿ ಟ್ವೀಟ್ ಮಾಡಿರುವ ಬಗ್ಗೆ ಅಲ್ಲಿನ ಆಡಳಿತ ಆತಂಕ ವ್ಯಕ್ತಪಡಿಸಿತ್ತು.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಕತಾರ್ ಭೇಟಿಯಲ್ಲಿದ್ದು, ಅಲ್ಲಿನ ಆಂತರಿಕ ಸಚಿವ ಶೇಖ್ ಖಾಲೀದ್ ಬಿನ್ ಖಲೀಫಾ ಬಿನ್ ಅಬ್ದುಲಾಜಿಜ್ ಅಲ್ ಥಾನಿ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲೇ ಈ ವಿವಾದ ಉಂಟಾಗಿದೆ.